ಬೆಂಗಳೂರು, ಜೂ.24(DaijiworldNews/AA): ಜನ ಯಾರನ್ನು ಬಯಸುತ್ತಾರೋ ಅವರೇ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಬೈಎಲೆಕ್ಷನ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ನಮ್ಮ ಜಿಲ್ಲೆ, ಪಕ್ಷದ ಅಧ್ಯಕ್ಷ, ಡಿಸಿಎಂ ಆಗಿ ಡಿಕೆ ಶಿವಕುಮಾರ್ಗೆ ಜವಾಬ್ದಾರಿ ಇದೆ. ಉಪಚುನಾವಣೆ ಬರುವುದರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಿಲ್ಲ. ಹಾಗಾಗಿ ಕಾರ್ಯಕರ್ತರು ಸಾಕಷ್ಟು ಅಹವಾಲು ಕೊಡುತ್ತಾ ಇದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಭೇಟಿ ಕೊಡುತ್ತಿದ್ದಾರೆ ಎಂದರು.
ಬೈಎಲೆಕ್ಷನ್ನಲ್ಲಿ ತಾವು ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ನನ್ನನ್ನು ಜನರು ತಿರಸ್ಕರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತು ಒಂದು ತಿಂಗಳೂ ಆಗಿಲ್ಲ. ಆಗಲೇ ಇನ್ನೊಂದು ಚುನಾವಣೆ ಎಂದರೆ ಜನ ನಗುತ್ತಾರೆ. ಬೇರೆಯವರು ಕೆಲಸ ಮಾಡಲಿ, ನಾವು ಸಹಕಾರ ಕೊಡೋಣ. ಮೊದಲಿಂದಲೂ ಚನ್ನಪಟ್ಟಣ ಕ್ಷೇತ್ರದೊಂದಿಗೆ ಒಡನಾಟವಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲವಾಗಿದೆ, ನಾಯಕತ್ವ ಇರಲಿಲ್ಲ. ನಮ್ಮ ಪಕ್ಷಕ್ಕೆ ಬರೋದು ಹೋಗೋದರಿಂದ ನಮಗೆ ಹಿನ್ನಡೆ ಆಗಿತ್ತು ಎಂದು ತಿಳಿಸಿದರು.
ಜನರು ಬಯಸಿದರೆ ನಾನೇ ಸ್ಪರ್ಧೆ ಮಾಡುತ್ತೇನೆಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಜನ ಏನು ತೀರ್ಮಾನಿಸುತ್ತಾರೋ ಅದಕ್ಕೆ ತಲೆ ಬಾಗುತ್ತೇವೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಹೇಳಿದರು.