ನವದೆಹಲಿ, ಜೂ.23(DaijiworldNews/AA): ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಇಂದು ಮರು ಪರೀಕ್ಷೆ ನಡೆಸಲಾಯಿತು. ಈ ಮರುಪರೀಕ್ಷೆಯಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಗೈರಾಗಿದ್ದಾರೆ.
ಇಂದು ನಡೆದ ನೀಟ್ ಮರುಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಪಡೆದ 1,563 ಅಭ್ಯರ್ಥಿಗಳ ಪೈಕಿ 750 ಅಭ್ಯರ್ಥಿಗಳು ಗೈರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಚಂಡೀಗಢ, ಗುಜರಾತ್, ಹರಿಯಾಣ, ಮೇಘಾಲಯ ಸೇರಿ ಆರು ರಾಜ್ಯಗಳ ನಗರಗಳಲ್ಲಿ ಇಂದು ನೀಟ್ ಮರು ಪರೀಕ್ಷೆ ನಡೆದಿದೆ. ಈ ಪರೀಕ್ಷೆಯಲ್ಲಿ 813 ಅಭ್ಯರ್ಥಿಗಳು ಮಾತ್ರ ಹಾಜರಾಗಿರುತ್ತಾರೆ. ಆ ಮೂಲಕ ಅಭ್ಯರ್ಥಿಗಳ ಭವಿಷ್ಯದ ಗತಿ ಏನು ಎಂಬ ಬಗ್ಗೆ ಪ್ರಶ್ನೆ ಮೂಡಿದೆ.
ಛತ್ತೀಸ್ಗಢದಲ್ಲಿ 602 ಅಭ್ಯರ್ಥಿಗಳ ಪೈಕಿ 291 ವಿದ್ಯಾರ್ಥಿಗಳು ಹಾಜರಾದರೆ, ಹರಿಯಾಣದಲ್ಲಿ 494 ಅಭ್ಯರ್ಥಿಗಳ ಪೈಕಿ 287, ಮೇಘಾಲಯದಲ್ಲಿ 464 ವಿದ್ಯಾರ್ಥಿಗಳ ಪೈಕಿ 234 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಗುಜರಾತ್ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಮರು ಪರೀಕ್ಷೆಗೆ ಹಾಜರಾಗಿದ್ದಾನೆ ಎಂದು ಎನ್ಟಿಎ ಮಾಹಿತಿ ನೀಡಿದೆ.