ರಾಯ್ಪುರ, ಜೂ.23(DaijiworldNews/AA): ಛತ್ತೀಸ್ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮುಂದುವರೆದಿದ್ದು, ಇಂದು ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ ಸ್ಫೋಟದಲ್ಲಿ ಇಬ್ಬರು ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಸುಕ್ಮಾ ಜಿಲ್ಲೆಯ ಸಿಲ್ಗರ್ ಹಾಗೂ ತೆಕುಲಗುಡೆಮ್ ಪ್ರದೇಶದ ನಡುವೆ ನಕ್ಸಲರು ಐಇಡಿ ಇರಿಸಿದ್ದರು. ಸಿಆರ್ಪಿಎಫ್ ವಾಹನವು ಈ ಪ್ರದೇಶದಲ್ಲಿ ಗಸ್ತು ತಿರುಗುವಾಗ ಅದನ್ನು ಸ್ಫೋಟಿಸಲಾಗಿದೆ. ಈ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಹುತಾತ್ಮರಾದ ಸಿಬ್ಬಂದಿಯನ್ನು ಕೇರಳದ ತಿರುವನಂತಪುರಂನ ಟ್ರಕ್ ಚಾಲಕ ವಿಷ್ಣು (35) ಹಾಗೂ ಉತ್ತರ ಪ್ರದೇಶದ ಕಾನ್ಪುರದ ಸಿಆರ್ಪಿಎಫ್ ಪೇದೆ ಶೈಲೇಂದ್ರ (29) ಎಂದು ಗುರುತಿಸಲಾಗಿದೆ.
ಸೇನೆಯ ಟ್ರಕ್ ಮೂಲಕ ಯೋಧರು ಕಾಡಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ ಎಂಬ ಮಾಹಿತಿಯು ನಕ್ಸಲರಿಗೆ ಮೊದಲೇ ತಿಳಿದಿತ್ತು. ಆದ್ದರಿಂದ ನಕ್ಸಲರು ಐಇಡಿ ಇರಿಸಿದ್ದರು. ಬಳಿಕ ವಾಹನ ತೆರಳುವಾಗಲೇ ಐಇಡಿಯನ್ನು ಸ್ಫೋಟಿಸಿದ್ದಾರೆ. ಇನ್ನು ಸ್ಫೋಟದ ಬಳಿಕ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಇಡೀ ಪ್ರದೇಶವನ್ನು ಸುತ್ತುವರಿದಿರುವ ಅವರು, ನಕ್ಸಲರ ಹತ್ಯೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.