ಬೆಂಗಳೂರು, ಜೂ.22(DaijiworldNews/AA): ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ವಿಚಾರವಾಗಿ ನಿಷ್ಪಕ್ಷಪಾತ ತನಿಖೆ ಆಗಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪ್ರಜ್ವಲ್ ರೇವಣ್ಣನ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ಸೂರಜ್ ರೇವಣ್ಣರ ವಿಚಾರದಲ್ಲೂ ನ್ಯಾಯಯುತ ತನಿಖೆಯಾಗಲಿ. ನಾನು ಕೂಡ ಮಾಧ್ಯಮದಲ್ಲಿ ಸೂರಜ್ ರೇವಣ್ಣ ಬಗ್ಗೆ ನೋಡಿದ್ದೇನೆ. ಸೂರಜ್ ರೇವಣ್ಣ ಕೂಡ ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಕೇಸ್ನಲ್ಲಿ ಮೇಲ್ನೋಟಕ್ಕೆ ಗೊಂದಲ ಕಾಣಿಸುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.
ತಪ್ಪಿತಸ್ಥರು ಯಾರೇ ಇರಲಿ ಕಾನೂನು ಕ್ರಮ ಆಗೇ ಆಗುತ್ತೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಒಳ್ಳೆಯದಲ್ಲ. ಎರಡೂ ಕಡೆ ದೂರು ದಾಖಲಾದ ಹಿನ್ನೆಲೆಯಲ್ಲಿ ಇದು ಜಟಿಲ ಕೇಸ್ ರೀತಿಯಲ್ಲಿ ಕಾಣಿಸುತ್ತಿದೆ. ಮೊದಲು ದೂರು ಕೊಟ್ಟಿದು ಸೂರಜ್ ರೇವಣ್ಣ. ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಸೂಕ್ತ ತನಿಖೆಯಾಗಲಿ. ಸತ್ಯಾಸತ್ಯತೆ ಹೊರ ಬರಲಿ. ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ. ಇದರ ಬಗ್ಗೆ ಅವರ ನಾಯಕರು ಮಾತನಾಡುತ್ತಾರೆ ಎಂದರು.