ಬೆಂಗಳೂರು, ಜೂ.22(DaijiworldNews/AA): ಮೂರನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದಕ್ಕೆ ಕಾಂಗ್ರೆಸ್ಗೆ ಹೊಟ್ಟೆಕಿಚ್ಚು ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಿಂದ ಆಯ್ಕೆಯಾದ ನೂತನ ಬಿಜೆಪಿ ಹಾಗೂ ಜೆಡಿಎಸ್ ಸಂಸದರಿಗೆ ಮತ್ತು ಕೇಂದ್ರ ಸಚಿವರಿಗೆ ಅರಮನೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪಪ್ರಚಾರದ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 19 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ಅಹಂಕಾರಕ್ಕೆ ಜನರು ಕಪಾಳ ಮೋಕ್ಷ ಮಾಡಿದ್ದಾರೆ. ಇವರು ಗ್ಯಾರಂಟಿ ನೀಡಿ ಜನರ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯನ್ನು ವಿರೋಧಿಸಲೆಂದೇ ಇಂಡಿಯಾ ಮೈತ್ರಿಕೂಟ ಹುಟ್ಟಿಕೊಂಡಿದೆ. ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಅರ್ಥವೇ ಇಲ್ಲ. ಕಾಂಗ್ರೆಸ್ ಪಕ್ಷ ದೇಶದ ಜನರಲ್ಲಿ ಭ್ರಮೆಯನ್ನು ಬಿತ್ತುವ ಕೆಲಸ ಮಾಡ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ವಿಚಾರದಲ್ಲಿ ಒಬ್ಬ ಸಚಿವನಿಂದ ರಾಜೀನಾಮೆ ಕೊಡಿಸಿ ಸಿದ್ದರಾಮಯ್ಯ ಅವರು ತಾನು ಸಾಚಾ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳದ್ದೂ ಜವಾಬ್ದಾರಿ ಇದೆ. ಹೀಗಾಗಿ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕಿತ್ತು ಎಂದು ಕಿಡಿ ಕಾರಿದ್ದಾರೆ.
ದೇಶದಲ್ಲಿ ಜನರು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಿಗೆ ಶೇ.56 ರಷ್ಟು ಮತ ನೀಡಿದ್ದಾರೆ. ಕಾಂಗ್ರೆಸ್ ಸೋತ ತಕ್ಷಣ ಸಿದ್ದರಾಮಯ್ಯ ಬೆಲೆ ಏರಿಕೆ ಮಾಡಿದ್ದಾರೆ. ಜನರ ವಿರುದ್ಧ ದ್ವೇಷದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.