ಬೆಂಗಳೂರು, ಜೂ. 18(DaijiworldNews/AK): ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಬೇಕು ಎಂಬ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಿಗಿಯಾಗಿ ಆಡಳಿತ ನಡೆಸಿದರೆ ಇವತ್ತು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡೋ ಅವಶ್ಯಕತೆ ಬರುತ್ತಿರಲಿಲ್ಲ ಎಂದು ರಾಜ್ಯ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ತೈಲ ಬೆಲೆ ಏರಿಕೆ ವಿರುದ್ಧ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡೋದು ಆಮೇಲೆ. ಈಗ ನೀವು ಯಾಕೆ ತರಾತುರಿಯಲ್ಲಿ 3 ರೂ. ಮತ್ತು 3.50 ರೂ. ಬೆಲೆ ಏರಿಕೆ ಮಾಡಿದ್ರಿ. ಕೇಂದ್ರ ಸರ್ಕಾರ ಬೆಲೆ ಇಳಿಕೆ ಬಗ್ಗೆ ಇಷ್ಟು ದಿನ ಯಾಕೆ ನೀವು ಮಾತಾಡಿಲ್ಲ. ಮೊದಲೇ ಅದನ್ನು ಹೇಳಬೇಕಿತ್ತು ಅಲ್ಲವಾ? ಸರ್ಕಾರದಲ್ಲಿ ಹಣದ ಕೊರತೆಯಿಂದ ಇವತ್ತು ಬೆಲೆ ಏರಿಕೆ ಮಾಡಿ 3 ಸಾವಿರ ಕೋಟಿ ಆದಾಯ ತೆಗೆಯಲು ಹೊರಟಿದ್ದೀರಾ? 3 ಸಾವಿರ ಕೋಟಿ ಜನರ ಜೇಬಿಂದ ಕಿತ್ತುಕೊಳ್ಳೋಕೆ ಹೊರಟಿದ್ದೀರಾ? ಜನರ ದುಡ್ಡು ತೆಗೆದುಕೊಂಡು ನೀವೇನು ಗ್ಯಾರಂಟಿ ಕೊಡೋದು? ಜನರ ದುಡ್ಡು ತಗೊಂಡು ಜನರಿಗೆ ಕೊಡೋಕೆ ನೀವೇ ಬೇಕಾ? ಯಾರು ಬೇಕಾದರೂ ಆಡಳಿತ ನಡೆಸುತ್ತಾರೆ ಎಂದು ಕಿಡಿಕಾರಿದರು.
ಇವತ್ತು ಹಲವಾರು ಇಲಾಖೆಗಳಲ್ಲಿ ಹಣ ಸೋರಿಕೆ ಆಗುತ್ತಿದೆ. ಬಿಬಿಎಂಪಿ ಬಗ್ಗೆ ಇವತ್ತು ಒಂದು ಆರ್ಟಿಕಲ್ ಓದಿದೆ. ಬಿಬಿಎಂಪಿಯಲ್ಲಿ ಒಂದು ಕೆಲಸಕ್ಕೆ ಎರಡು ಬಿಲ್ ಮಾಡಿ ಕೋಟ್ಯಂತರ ರೂ. ಲೂಟಿ ಹೊಡೆದಿದ್ದಾರೆ ಅಂತ ದೊಡ್ಡ ಸುದ್ದಿ ಪತ್ರಿಕೆಯಲ್ಲಿ ಇದೆ. ಬೋರ್ಡ್, ಕಾರ್ಪೋರೇಷನ್ಗಳಲ್ಲಿ ಇರೋ ದುಡ್ಡಿಗೆ ಹೇಳೋರು ಕೇಳೋರು ಇಲ್ಲ.ಅದು ಎಲ್ಲಿಗೆ ಹೋಗಿದೆಯೋ ಏನೋ? ಜನರ ಹೆಸರಲ್ಲಿ ಅ ಹಣವನ್ನು ಲೂಟಿ ಮಾಡಿಕೊಂಡು ಕೂತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.