ಬೆಂಗಳೂರು, ಜೂ 18 (DaijiworldNews/MS): ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ (KIOCL) ಕೈಗೆತ್ತಿಕೊಂಡಿರುವ ಗಣಿಗಾರಿಕೆ ಯೋಜನೆಯ ಬಗ್ಗೆ ಕಳವಳ ಬೇಡ ಎಂದು ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗಂಟಿ ವೆಂಕಟ ಕಿರಣ್ ಅವರು ಸೇರಿದಂತೆ ಇನ್ನೂ ಹಲವಾರು ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಮೋದಿ ಅವರ ಕನಸು ನನಸು
ಅರಣ್ಯ ನಾಶಕ್ಕೆ ನಾನು ಸಹಿ ಹಾಕಿದ್ದಲ್ಲ. ರಾಜ್ಯದಲ್ಲಿ ಉಕ್ಕು ಉತ್ಪಾದನೆ ಆಗಬೇಕು ಹಾಗೂ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಿ ನಮ್ಮ ಯುವಕರಿಗೆ ಉದ್ಯೋಗ ದೊರೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಆಶಯದಂತೆ ಜಿಡಿಪಿ ವೃದ್ಧಿಗೆ ಹೆಚ್ಚು ಕಾಣಿಕೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಉಳಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.
ಅರಣ್ಯ ನಾಶದ ಆತಂಕ ಬೇಡ
ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಜನರಲ್ಲಿ ಸ್ವಲ್ಪ ಮಟ್ಟಿಗಿನ ಆತಂಕ ಉಂಟಾಗುವ ರೀತಿಯಲ್ಲಿ ಪ್ರಚಾರವಾಗಿದೆ. 2019ರಲ್ಲಿ ರಾಜ್ಯ ಸರಕಾರವೇ ದೇವದಾರಿ ಗಣಿಗಾರಿಕೆ ಯೋಜನೆಗೆ 404 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿದೆ. ನಂತರ ಕೇಂದ್ರ ಸರಕಾರದ ಪರಿಸರ ಇಲಾಖೆ ಕೂಡ ಅನುಮತಿ ನೀಡಿದೆ. ಆದರೆ, ಕುಮಾರಸ್ವಾಮಿ ಅವರು ಗಣಿಗಾರಿಕೆಗೆ ಅನುಮತಿ ನೀಡುವ ಯೋಜನೆಗೆ ಸಹಿ ಹಾಕಿದ್ದಾರೆ. ದೇವದಾರಿ ಭಾಗದಲ್ಲಿ ಅರಣ್ಯ ಮತ್ತು ಜೀವರಾಶಿಗಳಿಗೆ ಹಾನಿ ಆಗುತ್ತದೆ. 99 ಸಾವಿರ ಮರಗಳಿಗೆ ಧಕ್ಕೆ ಆಗುತ್ತದೆ ಎಂದು ವರದಿಗಳು ಬಂದಿವೆ. ಆದರೆ, ಅರಣ್ಯ ನಾಶದ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ಕುದುರೆಮುಖ ಕಂಪನಿ ಅದಿರು ತೆಗೆಯುವ ಕೆಲಸ ಪ್ರಾರಂಭ ಮಾಡುವ ಮುನ್ನವೇ ಸುಮಾರು 194 ಕೋಟಿ ರೂಪಾಯಿ ವೆಚ್ಚದಲ್ಲಿ 808 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯವಾಗಿ ಅರಣ್ಯ ಬೆಳೆಸಲಿದೆ. ಅದಕ್ಕೆ ಅರಣ್ಯ ಇಲಾಖೆಗೆ ಹಣ ಪಾವತಿಸಿದೆ. ಜೀವರಾಶಿಗೆ ತೊಂದರೆಯಾಗದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ವಿಷಯವನ್ನು ಆ ಭಾಗದ ಜನತೆ ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಅಧಿಕಾರಿಗಳ ಜತೆ ಸಭೆ
ಇದಕ್ಕೂ ಮೊದಲು ಅಧಿಕಾರಿಗಳ ಜತೆ ಸಭೆ ನಡೆಸಿದ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು; ಕುದುರೆಮುಖ ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗಂಟಿ ವೆಂಕಟ ಕಿರಣ್ ಅವರು ನೀಡಿದ ಕಂಪನಿಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಅವರು; ಉಕ್ಕು ಉತ್ಪಾದನೆ, ರಪ್ತು ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು.
ದೇವದಾರಿ ಯೋಜನೆ ಪ್ರಧಾನಿಗಳ ನೂರು ದಿನ ಕಾರ್ಯಸೂಚಿಯಲ್ಲಿ ಇದ್ದು; ಈ ಬಗ್ಗೆ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ ಸಚಿವರು, ಆದಷ್ಟು ಬೇಗ ಗಣಿಗಾರಿಕೆ ಆರಂಭ ಮಾಡಿ ಎಂದು ಹೇಳಿದರು.
ವಿಶ್ವೇಶ್ವರಯ್ಯ ಕಬ್ಬಿಣ ಅದಿರು ಕಾರ್ಖಾನೆ ಬಗ್ಗೆ ಚರ್ಚೆ
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಅದಿರು ಕಾರ್ಖಾನೆ ಪುನಶ್ಚೇತನ ಬಗ್ಗೆ ಕೂಡ ಸಭೆಯಲ್ಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಚರ್ಚೆ ನಡೆಸಿದರು.
ಈ ಬಗ್ಗೆ ಆಲೋಚನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಕೇಂದ್ರ ಸಚಿವರು; ಇದು ಒಳ್ಳೆಯ ಕಾರ್ಖಾನೆ, ಕರ್ನಾಟಕದ ಹೆಗ್ಗುರುತು ಆಗಿತ್ತು. ಅದನ್ನು ಉಳಿಸುವ ಬಗ್ಗೆ ಚಿಂತನೆ ಮಾಡಿ ಎಂದರು.
Spaclity ಸ್ಟೀಲ್ ಉತ್ಪಾದನೆಗೆ ಒತ್ತು ಕೊಡಿ
Spaclity ಸ್ಟೀಲ್ (ಮೌಲ್ಯಾಧಾರಿತ ಉಕ್ಕು) ಅನ್ನು ಹೆಚ್ಚು ಉತ್ಪಾದನೆ ಮಾಡುವ ಕಡೆ ಹೆಚ್ಚು ಗಮನ ಹರಿಸಿ. ಜಾಗತಿಕವಾಗಿ ಅದರಲ್ಲಿಯೂ ಚೀನಾ, ತೈವಾನ್, ದಕ್ಷಿಣ ಕೊರಿಯಾ ಪೈಪೋಟಿ ಎದುರಿಸಲು Spaclity ಸ್ಟೀಲ್ ಉತ್ಪಾದನೆ ಕಡೆ ಹೆಚ್ಚು ಗಮನ ಕೊಡಿ. Spaclity ಸ್ಟೀಲ್ ಉತ್ಪಾದನೆಗೆ ಅಗತ್ಯವಾದ ತಂತ್ರಜ್ಞಾನ ಜೋಡಿಸಿಕೊಳ್ಳಿ ಎಂದು ಸಚಿವರು ನಿರ್ದೇಶನ ನೀಡಿದರು.