ಕಾರವಾರ, ಜೂ. 18(DaijiworldNews/AA): ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯನನ್ನು ಎನ್ಐಎ ಅಧಿಕಾರಿಗಳು ಬಂಧಿಸಿರುವ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.
ಅಬ್ದುಲ್ ಶಕೂರ್(32) ಬಂಧಿತ ಆರೋಪಿ. ಈತನನ್ನು ಕೋಮು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದ ಹಿನ್ನೆಲೆ ಎನ್ಐಎ ತಂಡ ದಾಳಿ ನಡೆಸಿ ಬಂಧಿಸಿದೆ.
ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ಕೆಲ ದಿನಗಳ ಹಿಂದಷ್ಟೇ ಬಕ್ರೀದ್ ಆಚರಣೆಗಾಗಿ ತನ್ನ ಊರಿಗೆ ಬಂದಿದ್ದ. ಈತ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಸೃಷ್ಟಿಸುವಂತಹ ಪೋಸ್ಟ್ ಮಾಡಿದ್ದಾನೆ. ಈ ಹಿನ್ನೆಲೆ ಯುವಕನನ್ನು ಎನ್ಐಎ ಅಧಿಕಾರಿಗಳು ಬನವಾಸಿ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ. ಈತನ ಮೇಲೆ ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ, ಶಿವಮೊಗ್ಗದಲ್ಲಿ ಮಸೀದಿ ಹಾಗೂ ಇತರೆ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿರುವ ಆರೋಪವಿದೆ.
ಆರೋಪಿಯನ್ನು ಆನ್ಲೈನ್ ಮೂಲಕ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹಾಗೂ ಪಾಸ್ಪೋರ್ಟ್ ನಕಲಿ ದಾಖಲೆ ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಸದ್ಯ ಬಂಧಿತನಿಗೆ ನೋಟೀಸ್ ನೀಡಿ ಗುಪ್ತ ಸ್ಥಳದಲ್ಲಿ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.