ನವದೆಹಲಿ, ಜೂ. 18(DaijiworldNews/AK): ನೀಟ್ ಪರೀಕ್ಷೆಯ ನಿರ್ವಹಣೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮ ಬಗ್ಗೆ ವೈದ್ಯಕೀಯ ಆಕಾಂಕ್ಷಿಗಳು ಮತ್ತು ಅವರ ಪೋಷಕರು ಪ್ರತಿಭಟನೆಯ ನಡೆಸಿದ್ದು, ಈ ಹಿನ್ನಲೆ ಸಣ್ಣ ನಿರ್ಲಕ್ಷ್ಯವನ್ನು ಸಹ ಕಡೆಗಣಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನೀಟ್ ವೈದ್ಯಕೀಯ ಮತ್ತು ಸಂಬಂಧಿತ ಶೈಕ್ಷಣಿಕ ಕ್ಷೇತ್ರಗಳಿಗೆ ಭಾರತದ ಮುಖ್ಯ ಪ್ರವೇಶ ಪರೀಕ್ಷೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರತಿ ವರ್ಷ ಪರೀಕ್ಷೆಯನ್ನು ನಡೆಸುತ್ತದೆ. ಎನ್ಟಿಎ ಮತ್ತು ಕೇಂದ್ರಕ್ಕೆ ನೋಟಿಸ್ಗಳನ್ನು ನೀಡಿದ ನ್ಯಾಯಾಲಯ, ಶೇಕಡಾ 0.001 ನಿರ್ಲಕ್ಷ್ಯ ಆಗಿದ್ದರೂ ಸಹ ಅದನ್ನು ಸಂಪೂರ್ಣವಾಗಿ ಪರಿಹರಿಸಬೇಕು ಎಂದು ಹೇಳಿದೆ.
ಮಕ್ಕಳು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ, ಅವರ ಶ್ರಮವನ್ನು ನಾವು ಮರೆಯಲು ಸಾಧ್ಯವಿಲ್ಲ”. ಈ ಬಗ್ಗೆ ಸಕಾಲಿಕ ಕ್ರಮವನ್ನು ಸುಪ್ರೀಂ ಕೋರ್ಟ್ ನಿರೀಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಎನ್ಟಿಎಗೆ ತಿಳಿಸಿದ್ದು ಜುಲೈ 8 ರಂದು ಅರ್ಜಿಗಳ ವಿಚಾರಣೆ ನಡೆಯಲಿದೆ.
ನೀಟ್-ಯುಜಿ ಪರೀಕ್ಷೆಯನ್ನು ಮೇ 5 ರಂದು ಭಾರತದ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆಸಲಾಯಿತು. ಜೂನ್ 4ರಂದು ಫಲಿತಾಂಶ ಪ್ರಕಟವಾಗಿತ್ತು. ಆದರೆ, ಫಲಿತಾಂಶ ಪ್ರಕಟವಾದ ನಂತರ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿರುವ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಜೂನ್ 23 ರಂದು ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುಮತಿಸಲಾಗುವುದು ಮತ್ತು ಜೂನ್ 30 ರ ಮೊದಲು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.