ಬೆಂಗಳೂರು, ಜೂ. 17(DaijiworldNews/AA): ರಕ್ತದ ರುಚಿ ನೋಡಿದ ಹುಲಿ ಮತ್ತೆ ಮತ್ತೆ ಅದನ್ನೇ ಬಯಸುತ್ತದೆ. ಆಡಳಿತಕ್ಕೆ ಬಂದ ಕೂಡಲೇ ಗೋಸುಂಬೆ ಕೂಡ ನಾಚುವ ರೀತಿ ಬೆಲೆ ಏರಿಸಿ ಕೇಂದ್ರ ಕಡೆ ಬೊಟ್ಟು ಮಾಡಿದ್ದೀರಿ ಮುಖ್ಯಮಂತ್ರಿಗಳೇ ಎಂದು ಕಾಂಗ್ರೆಸ್ ವಿರುದ್ಧ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ತೈಲ ಬೆಲೆ ಹೆಚ್ಚಿಸಿರುವುದನ್ನು ಬಿಜೆಪಿ ಖಂಡಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ. ರವಿ ಅವರು, ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿ ಬಕ್ರೀದ್ ಹಿಂದಿನ ದಿನ ಜನರನ್ನು ಬಕ್ರಾ ಮಾಡಲು ಬೆಲೆ ಏರಿಕೆ ಮಾಡಲಾಗಿದೆ. ಊಸರವಳ್ಳಿಗೂ ನಿಮಗೂ ಸ್ಪರ್ಧೆ ಮಾಡಿದರೆ ಗೆಲ್ಲೋದು ನೀವೆ ಎಂದು ಲೇವಡಿ ಮಾಡಿದ್ದಾರೆ.
ಜಿಎಸ್ಟಿ ಜೊತೆ ವೈಎಸ್ಟಿ ತಂದ್ರಿ, ಜೊತೆಗೆ ಡಿಕೆ ಟ್ಯಾಕ್ಸ್ ಕೂಡ ಇದೆ. ನಿಮ್ಮದು ನಾಲಗೆಯಾ ಏನೂ ಅಂತಾ ಪ್ರಶ್ನೆ ಮಾಡಬೇಕಾಗುತ್ತೆ. ನಿಮ್ಮದು ನಾಲಿಗೆ ಅಲ್ಲ ಎಕ್ಕಡಕ್ಕಿಂತ ಕಡೆ ಅಂತಾ ಜನ ಹೇಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರವಿರುವ ೩ ಕಡೆಯೂ ಜನರಿಗೆ ನಾಮ ಹಾಕ್ತಾರೆ. ಬಕ್ರೀದ್ ದಿನ ಸಿಎಂ ಮಾತ್ರ ಟೋಪಿ ಹಾಕಿಕೊಳ್ತಾರೆ ಅಂದುಕೊಂಡಿದ್ವಿ. ಆದ್ರೆ ಇವರು ಎಲ್ಲರಿಗೂ ಟೋಪಿ ಹಾಕಿದ್ದಾರೆ. ಚೊಂಬು ಆದರೂ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ ನಾಯಕರು ಕೊಡುವುದು ಹಳೆಯ ಚಿಪ್ಪು. ಚಿಪ್ಪು ಕೂಡ ಮೂರು ತೂತು, ಇವರ ಸರ್ಕಾರವೂ ತೂತು. ಸಂಗ್ರಹ ಮಾಡಿದ ಹಣವೆಲ್ಲಾ ರಾಹುಲ್ ಗಾಂಧಿಗೆ ಹೋಗುತ್ತಿದೆ. ಬೆಲೆ ಇಳಿಸಬೇಕು ಇಲ್ಲಾ ಅವರೇ ಕೆಳಗೆ ಇಳಿಯಬೇಕು. ಇಳಿಯದಿದ್ದರೆ ಹೇಗೆ ಇಳಿಸಬೇಕೆಂದು ನಮಗೆ ತಿಳಿದಿದೆ. ನುಂಗಣ್ಣ, ನುಂಗಣ್ಣ ಅಂತಾ ನುಂಗುವ ಕೆಲಸ ಒಂದೇ ಮಾಡ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.