ಬೆಂಗಳೂರು, ಜೂ. 17(DaijiworldNews/AA): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿ 19 ಮಂದಿಯ ಬಂಧನವಾದ ಬೆನ್ನಲ್ಲೇ ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯನಟನಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಮತ್ತು ಗ್ಯಾಂಗ್ ಸದಸ್ಯರು ಆರ್ಆರ್ ನಗರದ ಸ್ಟೋನಿಬ್ರೂಕ್ ಪಬ್ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಖ್ಯಾತ ಹಾಸ್ಯನಟ ಹಾಗೂ ನಿರ್ಮಾಪಕರೂ ಭಾಗಿಯಾಗಿದ್ದರು. ಬಳಿಕ ಸಂಜೆ ವೇಳೆಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ದರ್ಶನ್ ಹೊರಟಿದ್ದರು. ಪಾರ್ಟಿಯಿಂದ ಪಟ್ಟಣಗೆರೆ ಶೆಡ್ಗೆ ತೆರಳಿದ ಅವರು ರೇಣುಕಾಸ್ವಾಮಿಗೆ ಹಲ್ಲೆಗೈದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಪಾರ್ಟಿಯಲ್ಲಿ ದರ್ಶನ್ ಜೊತೆ ಭಾಗಿಯಾದ ಹಿನ್ನೆಲೆ ಹಾಸ್ಯನಟನಿಗೆ ಚಿಕ್ಕಣ್ಣಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅನ್ನಪೂರ್ಣೇಶ್ವರಿನಗರ ಪೊಲೀಸರು ನೋಟಿಸ್ ನೀಡುವ ಸಾಧ್ಯತೆಯಿದೆ. ಇಂದು ಸಂಜೆಯೇ ನೋಟಿಸ್ ನೀಡಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಹತ್ಯೆ ವಿಚಾರವಾಗಿ ಪಬ್ನಲ್ಲಿ ಏನಾದರೂ ಚರ್ಚೆ ನಡೆದಿತ್ತಾ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಈಗ ಹಾಸ್ಯನಟನಿಗೆ ನೋಟಿಸ್ ಕೊಟ್ಟು ಕರೆಸಬೇಕೇ? ಬೇಡವೇ ಎಂಬುದರ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಸಲಹೆ ಕೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ ಕಾರಣ ಹಾಸ್ಯ ನಟನನ್ನು ಬಂಧಿಸುವುದಿಲ್ಲ. ಬದಲಾಗಿ ಸಾಕ್ಷಿಯನ್ನಾಗಿ ಪರಿಗಣಿಸಿ ಕೊಲೆಯ ಬಗ್ಗೆ ಮಾಹಿತಿ ಇಲ್ಲದೇ ಇದ್ದರೂ ಕೂಡ ಪಾರ್ಟಿಯಲ್ಲಿದ್ದರು ಎಂಬ ಕಾರಣಕ್ಕೆ ಪೊಲೀಸರು ಸಾಕ್ಷಿಯಾಗಿ ಪರಿಗಣಿಸಲಿದ್ದಾರೆ. ಈ ಹಿನ್ನೆಲೆ ಹಾಸ್ಯ ನಟನಿಗೆ ನೋಟಿಸ್ ನೀಡಿ ಪೊಲೀಸರು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.