ಬೆಂಗಳೂರು, ಜೂ. 15(DaijiworldNews/AA): ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿಯ ಪೊಲೀಸ್ ಕಸ್ಟಡಿಯನ್ನು 5 ದಿನಗಳ ಕಾಲ ಮುಂದುವರೆಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿಯಾಗಿರುವ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಯ ವಿಸ್ತರಣೆಗೆ ಮನವಿ ಮಾಡಲಾಗಿತ್ತು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ ಪೊಲೀಸ್ ಕಸ್ಟಡಿಯನ್ನು ಐದು ದಿನಗಳ ಕಾಲ ಮುಂದುವರೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಹಾಗೂ ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆ ವೇಳೆ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಲಾಗಿತ್ತು. ಈಗಾಗಲೇ ಆರೋಪಿಗಳು 5 ದಿನವನ್ನು ಕಸ್ಟಡಿಯಲ್ಲಿ ಕಳೆದಿದ್ದು, ನಾಳೆ ಭಾನುವಾರ ಆಗಿರುವ ಹಿನ್ನೆಲೆ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ವೇಳೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯನ್ನು ಮುಂದುವರೆಸಿ ಕೋರ್ಟ್ ಆದೇಶ ನೀಡಿದೆ.
ಪೊಲೀಸರ ಪರವಾಗಿ ವಿಶೇಷ ಅಭಿಯೋಜಕ ನ್ಯಾಯಾಲಯದಲ್ಲಿ ವಾದ ಮಂಡಸಿದ್ದು, ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಹಾಗೂ ವಿಚಾರಣೆಯ ಅವಶ್ಯಕತೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಮೊದಲು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಒಂಬತ್ತು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ಕೋರಲಾಗಿತ್ತು. ಆದರೆ ಇದಕ್ಕೆ ದರ್ಶನ್ ಪರ ಹಾಗೂ ಪವಿತ್ರಾ ಗೌಡ ಅವರ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದರು.