ಬೆಂಗಳೂರು, ಜೂ. 15(DaijiworldNews/AA): ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ದರವನ್ನು ಏರಿಕೆ ಮಾಡುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಇಂದು ಪ್ರಕಟಿಸಿದ್ದು, ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ.
ತೆರಿಗೆ ದರ ಏರಿಕೆಯಾದ ಹಿನ್ನೆಲೆ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್ 25.92% ಇದ್ದಿತ್ತು. ಇದೀಗ 29.84% ಗೆ ಹೆಚ್ಚಳವಾಗಿದೆ. ಅಂತೆಯೇ ಡಿಸೇಲ್ ಈ ಹಿಂದೆ 14.34% ಇದ್ದದ್ದು, ಈಗ 18.44%ಗೆ ಏರಿಕೆಯಾಗಿದೆ.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಬಹು ಸಮಯದ ಬಳಿಕ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.