ನವದೆಹಲಿ, ಜೂ 15 (DaijiworldNews/MS): ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿದ್ದು, ಈ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಜು. 22 ರಂದು ಮಂಡನೆಯಾಗುವ ಸಾಧ್ಯತೆಗಳು ಇವೆ.
18ನೇ ಲೋಕಸಭೆಯ ವಿಶೇಷ 8 ದಿನಗಳ ಸಂಸತ್ ಅಧಿವೇಶನ ಇದೇ ಜೂನ್ 24 ರಂದು ಪ್ರಾರಂಭವಾಗಿ ಜುಲೈ 3 ರವರೆಗೆ ಇರಲಿದೆ .ಈ ಅಧಿವೇಶನವು ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ, ಸ್ಪೀಕರ್ ಆಯ್ಕೆ, ರಾಷ್ಟ್ರಪತಿಗಳ ಭಾಷಣ ಮತ್ತು ನಂತರದ ಚರ್ಚೆಗಳನ್ನು ಒಳಗೊಂಡಿರುತ್ತದೆ. ಸಂಸತ್ತಿನ ಹೊಸ ಸದಸ್ಯರು ಜೂನ್ 24 ಮತ್ತು 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದಾದ ಬಳಿಕ ಪ್ರತಿವರ್ಷದಂತೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಂದು ಪ್ರಾರಂಭವಾಗಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಬಜೆಟ್ 2024-25 ನ್ನು ಅಧಿವೇಶನದ ಮೊದಲ ದಿನದಂದು ಮಂಡಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.