ಬೆಂಗಳೂರು, ಜೂ 13 (DaijiworldNews/ AK): ಮಹಿಳೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ವಿಸ್ತರಿಸಿದೆ.
ಈಗಾಗಲೇ ಭವಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೂರ್ಣವಾಗಿದ್ದು, ಜಾಮೀನು ಅರ್ಜಿ ಸಂಬಂಧ ಆದೇಶ ಕಾಯ್ದಿರಿಸಿದೆ. ಇನ್ನು ಈ ಕೇಸ್ಗೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದ ಭವಾನಿ ರೇವಣ್ಣ ಅವರು ಜೂ.07 ರಂದು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋದಲ್ಲಿ ‘ನನ್ನ ತಾಯಿಯ ಚಿತ್ರವೂ ಇದ್ದುಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆ.ಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ಹೆಚ್ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು. ಈಗಾಗಲೆ ಆರೋಪಿ ಬಾಬುನನ್ನು ಬಂಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣಗೂ ಕೂಡ ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕು. ಈ ಸಂಬಂಧ ಎಸ್ಐಟಿ ಭವಾನಿ ರೇವಣ್ಣ ಅವರಿಗೆ ಎರಡೆರಡು ನೋಟಿಸ್ ಕೊಟ್ಟಿತ್ತು.