ಮೈಸೂರು, ಜೂ 14 (DaijiworldNews/ AK): ನಟ ದರ್ಶನ್ ಪ್ರರಕಣದಲ್ಲಿ ಪ್ರಭಾವ ಬೀರಲು ನನ್ನ ಬಳಿ ಯಾರೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭಾವ ಬೆಳೆಸಲು ನನ್ನ ಬಳಿ ಬಂದಿದ್ದರು ಎಂಬುದು ಸತ್ಯಕ್ಕೆ ದೂರವಾದ ಮಾತು. ಯಾರು ಕೂಡ ನನ್ನ ಹತ್ತಿರ ಬಂದಿಲ್ಲ. ಯಾವ ಪ್ರಭಾವವೂ ನಡೆದಿಲ್ಲ ಎಂದರು.
ದರ್ಶನ್ ಇದ್ದ ಠಾಣೆಗೆ ಶಾಮಿಯಾನ ಕಟ್ಟಿದ ವಿಚಾರ ಕುರಿತು ಮಾತನಾಡಿ, ಪೊಲೀಸರು ಏನು ಮಾಡಿದ್ದಾರೆ ಅದು ನನಗೆ ಗೊತ್ತಿಲ್ಲ. ಅವರು ನಮ್ಮನ್ನ ಕೇಳಿ ಏನನ್ನೂ ಮಾಡುವುದಿಲ್ಲ. ಸಾರ್ವಜನಿಕರಿಗೆ ಅದರಿಂದ ತೊಂದರೆಯಾಗಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಾರ್ವಜನಕರು ನನಗೆ ದೂರು ಕೊಟ್ಟಿಲ್ಲ. ಆ ಬಗ್ಗೆ ದೂರು ಬಂದಾಗ ನೋಡುತ್ತೇನೆ ಎಂದರು.
ಯಡಿಯೂರಪ್ಪ ಪ್ರಕರಣದಲ್ಲಿ ಕೋರ್ಟ್ನ ಆದೇಶದ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ಯಾವತ್ತೂ ದ್ವೇಷದ ರಾಜಕಾರಣ ಮಾಡಲ್ಲ. ಕಾನೂನು ರೀತಿ ಕೆಲಸ ಮಾಡುತ್ತೇವೆ. ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ. ವಿರೋಧ ಪಕ್ಷಗಳ ಎಲ್ಲಾ ಆರೋಪಗಳಿಗೆ ನಾನು ಉತ್ತರ ಕೊಡಬೇಕು ಅಂಥ ಏನಿಲ್ಲ. ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇನೆ. ಯಾವುದೇ ಪ್ರಕರಣದಲ್ಲೂ ಕಾಂಗ್ರೆಸ್ ಯಾವತ್ತಿಗೂ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ಮತಕ್ಕಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ. ಯಾವುದೇ ಕಾರಣಕ್ಕೂ ಅದು ನಿಲ್ಲುವುದಿಲ್ಲ. ಪುನರ್ ಪರಿಶೀಲನೆ ಆಗುವುದಿಲ್ಲ. ವೋಟಿಗಾಗಿ ನಾವು ಅದನ್ನ ಜಾರಿಗೆ ತಂದಿಲ್ಲ. ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.