ಬೆಂಗಳೂರು, ಜೂ. 14(DaijiworldNews/AA): ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರಿ ಮಂಡಲದಲ್ಲಿ ಕೇಂದ್ರದ ಸಚಿವ ಆಗಿದ್ದೇನೆ. ನನ್ನ ಪಾಲಿಗೆ ಬಂದಿರೋ ಈ ಮಂತ್ರಿ ಸ್ಥಾನವನ್ನ ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ ಅವರಿಗಿಂದು ಅದ್ಧೂರಿ ಸ್ವಾಗತಿಸಲಾಗಿದ್ದು, ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರ ದುಡಿಮೆಗೆ 2008 ರಿಂದ ಯಾವುದೇ ರೀತಿಯ ಪ್ರತಿಫಲ ದೊರೆತಿರಲಿಲ್ಲ. ಈ ಸಮಯದಲ್ಲಿ ಪಕ್ಷವನ್ನ ಉಳಿಸಿ ಬೆಳೆಸಿದ ಲಕ್ಷಾಂತರ ಕಾರ್ಯಕರ್ತರು ಈ ರಾಜ್ಯದಲ್ಲಿ ಇದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ಮೋದಿ ಅವರು 2 ಬಾರಿ ಪ್ರಧಾನಿಯಾಗಿ ಉತ್ತಮವಾಗಿ ಕೆಲಸ ಮಾಡಿ, 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಜೊತೆ ರಾಜ್ಯದಲ್ಲಿ ಸರ್ಕಾರ ಮಾಡಿ ಏನಾಯ್ತು ಎಂದು ಜನರಿಗೆ ತಿಳಿದಿದೆ. ಅಂದು ಕೂಡ ಕಾಂಗ್ರೆಸ್ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡೋಕೆ ಬಿಡಲಿಲ್ಲ. ಹೀಗಾಗಿ ನಾವು ಶಾಸಕರ ಜೊತೆ ಸೇರಿ ಮುಂದೆ ಹೆಜ್ಜೆ ಇಟ್ಟಿದ್ವಿ. ಆದಾಗ ಬಳಿಕ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಸರ್ಕಾರ ಮಾಡೋಣ ಅಂತ ಹೋದ್ವಿ. ನಾನು ಆವತ್ತು ಎಂ.ಪಿ ಪ್ರಕಾಶ್ ಅವರಿಗೆ ನೀವೇ ಆಗಿ ಅಂತ ಹೇಳಿದ್ದೇ. ನಾನು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಅಂತ ಇದ್ದವನು ನಾನು, ಆದ್ರೆ ಅವರಿಗೆ ಅಧಿಕಾರ ಕೊಡಬಾರದು ಅಂತ ಕುತಂತ್ರ ನಡೆಯಿತು. ನಾನೂ ಸಹ ಆ ಕುತಂತ್ರಕ್ಕೆ ಬಲಿಯಾದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಪಕ್ಷ ಉಳಿಸಿಕೊಳ್ಳೋಕೆ 20 ತಿಂಗಳು ಕೆಲಸ ಮಾಡಿದೆ. ಅಂದು ಸಹ ನಾನು ಹಣದ ವ್ಯಾಮೋಹಕ್ಕೆ ಬಲಿಯಾಗಿಲ್ಲ. ನಾನು ಲಾಟರಿ ನಿಷೇಧ ಮಾಡಿದೆ, ಸಾರಾಯಿ ನಿಷೇಧ ಮಾಡಿದೆ. ಪಕ್ಷ ಕಟ್ಟಬೇಕು ಎಂದು ಗ್ರಾಮ ವಾಸ್ತವ್ಯ ಹೂಡಿದೆ. ಹಣ ಮಾಡೋಕೆ ಇಷ್ಟಪಡಲಿಲ್ಲ ಎಂದರು.
ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರಲು ಪ್ರಯತ್ನಿಸಿದೆ. ಅದಕ್ಕಾಗಿ ನನ್ನ ಆರೋಗ್ಯವನ್ನು ಸಹ ಲೆಕ್ಕಿಸದೇ ಕೆಲಸ ಮಾಡಿದೆ. ಆದರೆ ನಾನು ಅದರಲ್ಲಿ ಯಶಸ್ವಿಯಾಗಲಿಲ್ಲ. ನಾನು ಎಷ್ಟೇ ಶ್ರಮ ಹಾಕಿದರೂ 19 ಸೀಟ್ಗೆ ಇಳಿಯಿತು. ಜೆಡಿಎಸ್ ಮುಗಿದೇ ಹೋಯ್ತು. ಪಕ್ಷಕ್ಕೆ ಬನ್ನಿ ಅಂತ ಕಾಂಗ್ರೆಸ್ ಅವರು ಕರೆಯುತ್ತಿದ್ದರು, ಕ್ಷೇತ್ರದ ಕೆಲಸಕ್ಕೆ ಹೋದ್ರೆ ಹಣ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂತ ಹಣ ಕೋಡೋಕೆ ಬಂದಿದ್ದರು. ಜೆಡಿಎಸ್ ನಾಶ ಮಾಡ್ತೀವಿ ಅಂತ ಹೋದ್ರು. ಇವತ್ತು ಎಲ್ಲಿಗೆ ಬಂದು ನಿಂತಿದೆ? 2018ರಲ್ಲಿ ರಾಜ್ಯದ ವಿಷಯಗಳ ಬಗ್ಗೆ ಮೋದಿ ಅವರಿಗೆ ಮಾತಾಡೋಕೆ ಹೋಗಿದ್ದೆ, ಆಗ ನಿನ್ನ ಕೆಲಸಕ್ಕೆ ಬೆಲೆ ಇಲ್ಲ. ನೀನು ರಾಜೀನಾಮೆ ಕೊಟ್ಟು ಬಾ, ನೀನೇ ಮುಖ್ಯಮಂತ್ರಿ ಆಗು ಎಂದು ಮೋದಿ ಹೇಳಿದ್ದರು. ಅಂದು ಮೋದಿ ಮಾತು ಕೇಳಿದ್ದರೆ ಕಾರ್ಯಕರ್ತರು ಇಷ್ಟು ಕಷ್ಟ ಪಡುತ್ತಿರಲಿಲ್ಲ. ಆ ಅವಕಾಶ ನಾನೇ ಕಳೆದುಕೊಂಡೆ ಎಂದು ಭಾವುಕರಾದರು.