ನವದೆಹಲಿ, ಜೂ 14 (DaijiworldNews/MS): ಗ್ಲ್ಯಾಮರ್ ಜಗತ್ತನ್ನು ಬಿಟ್ಟು ಸಿವಿಲ್ ಸರ್ವೀಸ್ ಕಡೆ ಮುಖ ಮಾಡಿದ ಐಶ್ವರ್ಯಾ ಶೆರಾನ್ ಅವರ ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ.
ಒಂದು ಕಾಲದಲ್ಲಿ ಮಾಡೆಲಿಂಗ್ ಹಾದಿ ಹಿಡಿದಿದ್ದ ಐಶ್ವರ್ಯಾ ಶೆರಾನ್ ಇಂದು ಐಎಫ್ ಎಸ್ ಅಧಿಕಾರಿ. ಅವರು ಎರಡು ವಿಭಿನ್ನ ವೃತ್ತಿ ಆಯ್ಕೆಗಳಲ್ಲಿ ಕೆಲಸ ಮಾಡಿ, ಎರಡರಲ್ಲೂ ಯಶಸ್ವಿಯಾಗಿದ್ದಾರೆ. ದೆಹಲಿ ಮೂಲದ ಐಶ್ವರ್ಯಾ ಶೆರಾನ್ ಮೊದಲಿನಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಬಹಳ ಜನಪ್ರಿಯರಾಗಿದ್ದಾರೆ.
ಬ್ಯೂಟಿ ಕ್ವೀನ್ ನಿಂದ ಆಡಳಿತ ಅಧಿಕಾರಿಯಾಗಿ ಅವರ ಪ್ರಯಾಣವು ತುಂಬಾ ಆಸಕ್ತಿದಾಯಕವಾಗಿದೆ. IFS ಐಶ್ವರ್ಯಾ ಶೆರಾನ್ 1997 ರಲ್ಲಿ ಜನಿಸಿದರು. ಅವರ ಕುಟುಂಬ ರಾಜಸ್ಥಾನದ ಚುರು ಮೂಲದವರು. ಈಕೆ ದೆಹಲಿಯಲ್ಲಿ ಬೆಳೆದಿದ್ದಾರೆ.
ಅವರು ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯ ಚೈತನ್ಯಪುರಿ ಪ್ರದೇಶದಲ್ಲಿರುವ ಸಂಸ್ಕೃತಿ ಶಾಲೆಯಲ್ಲಿ ಮಾಡಿದರು. ನಂತರ ಐಶ್ವರ್ಯಾ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.
ಅವರ ತಾಯಿಗೆ ಮಗಳು ಮಾಡೆಲ್ ಆಗಬೇಕೆಂದು ಬಯಸಿದ್ದರು. ನಟಿ ಐಶ್ವರ್ಯಾ ಅವರಿಂದ ಪ್ರಭಾವಿತರಾಗಿ ಮಗಳಿಗೆ ಐಶ್ವರ್ಯ ಎಂದು ಹೆಸರಿಟ್ಟಿದ್ದಾರೆ. ಆದರೆ ಐಶ್ವರ್ಯಾ ಶೆರಾನ್ ಆಡಳಿತ ಸೇವೆಗೆ ಹೋಗಲು ಬಯಸಿದ್ದರು. ಐಶ್ವರ್ಯ 2015 ರಲ್ಲಿ ಮಿಸ್ ದೆಹಲಿ ಪ್ರಶಸ್ತಿಯನ್ನು ಗೆದ್ದಕೊಂಡರು.
ಐಶ್ವರ್ಯಾ ಶೆರಾನ್ 2018 ರಲ್ಲಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಕೋಚಿಂಗ್ ಇಲ್ಲದೆ ಕೇವಲ 10 ತಿಂಗಳ ಕಾಲ ಮನೆಯಲ್ಲೇ ತಯಾರಿ ನಡೆಸಿದ್ದ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಪಡೆಯುವ ಮೂಲಕ ಯಶಸ್ಸಿನ ಹಾದಿಯನ್ನು ಕಂಡರು.