ಬೆಂಗಳೂರು, ಜೂ. 11(DaijiworldNews/AA): ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೊಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ ಕೋರಮಂಗಲದ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಆರೋಪಿಗಳನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೇಳಿದ್ದರು. ಆದರೆ ನ್ಯಾಯಾಲಯ 6 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಇನ್ನು ವಿಚಾರಣೆ ವೇಳೆ ತಾನು ವಕೀಲರನ್ನು ನೇಮಕ ಮಾಡಿಕೊಳ್ಳುವುದಾಗಿ, ಮನೆಯವರಿಗೆ ಬಂಧನದ ಮಾಹಿತಿ ನೀಡಿದ್ದೇನೆ ಎಂದು ನಟ ದರ್ಶನ್ ತಿಳಿಸಿದ್ದಾರೆ.
ಈ ವೇಳೆ ದರ್ಶನ್ ಪರ ವಕೀಲರು, ದರ್ಶನ್ ಅವರ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಶವ ಕೂಡ ಪತ್ತೆಯಾಗಿದೆ. ದರ್ಶನ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಅವರು ಎಲ್ಲೂ ತಪ್ಪಿಸಿಕೊಂಡಿಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದಾರೆ.