ನವದೆಹಲಿ, ಜೂ. 11(DaijiworldNews/AA): ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, 71 ಸಚಿವರಿಗೆ ಖಾತೆ ಕೂಡ ಹಂಚಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಜೂನ್ 24ರಿಂದ ಸಂಸತ್ ವಿಶೇಷ ಅಧಿವೇಶನ ಪ್ರಾರಂಭವಾಗಲಿದ್ದು, ಜುಲೈ 3ರವರೆಗೆ ಈ ಅಧಿವೇಶನ ನಡೆಯಲಿದೆ.
ಜೂನ್ 24ರಿಂದ ಆರಂಭವಾಗುವ ಈ ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಆಯ್ಕೆ ಸೇರಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಜೂನ್ 24 ಮತ್ತು 25ರಂದು ನೂತನ ಸಂಸದರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಜೂನ್ 26ರಂದು ಲೋಕಸಭೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಒಟ್ಟು 8 ದಿನಗಳವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಈವರೆಗೆ ಯಾವುದೇ ವಿಧೇಯಕಗಳ ಮಂಡನೆ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಸದ್ಯ ಅಮಿತ್ ಶಾ ಅವರಿಗೆ ಕೇಂದ್ರ ಗೃಹ ಖಾತೆಯನ್ನು, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ಹಾಗೂ ನಿತಿನ್ ಗಡ್ಕರಿ ಅವರಿಗೆ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಖಾತೆ ಹಂಚಿಕೆ ಮಾಡಲಾಗಿದೆ. ಹೀಗೆ ಬಿಜೆಪಿ ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ. ಜೊತೆಗೆ ಮೈತ್ರಿ ಸರ್ಕಾರದ ಮೇಲೆಯೂ ತಮ್ಮ ಹಿಡಿತ ಇದೆ ಎಂಬುದು ಖಾತೆ ಹಂಚಿಕೆಯ ಮೂಲಕ ತಿಳಿದುಬಂದಿದೆ.