ಬೆಂಗಳೂರು, ಜೂ. 10(DaijiworldNews/AA): ರಾಜ್ಯದ ಐವರಿಗೆ ಕೇಂದ್ರ ಸಚಿವ ಸ್ಥಾನ ದೊರೆತಿರುವುದನ್ನು ಸ್ವಾಗತಿಸುತ್ತೇನೆ. ಐವರು ರಾಜ್ಯದ ಸಮಸ್ಯೆಗಳನ್ನು ಕೇಂದ್ರದ ಮಟ್ಟದಲ್ಲಿ ಪರಿಹಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಐವರು ಸಚಿವರು ವಿಫಲರಾದರೆ ಅವರಿಗೂ, ಅವರ ಪಕ್ಷಕ್ಕೂ ನಷ್ಟವಾಗಲಿದೆ. ರಾಜ್ಯದ ಸಮಸ್ಯೆಗಳನ್ನು ಕೇಂದ್ರದಲ್ಲಿ ಪರಿಹರಿಸದಿದ್ದರೆ ಸಹಜವಾಗಿ ಅವರನ್ನು ದೂರಬೇಕಾಗುತ್ತದೆ. ಇದಕ್ಕೆ ಅವರು ಅವಕಾಶ ನೀಡುವುದಿಲ್ಲ ಎಂದು ತಿಳಿಯುತ್ತೇನೆ ಎಂದು ತಿಳಿಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಅವರ ನೂತನ ಕೇಂದ್ರ ಸಚಿವರಾದ ಬಗ್ಗೆ ಮಾತನಾಡಿದ ಪರಮೇಶ್ವರ್, ಅವರು 2 ಬಾರಿ ಮುಖ್ಯಮಂತ್ರಿ ಆಗಿದ್ದವರು. ಇದೀಗ ಕೇಂದ್ರದಲ್ಲಿ ಸಚಿವರಾಗಿ ಆಯ್ಕೆ ಆಗಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ಕೇಂದ್ರದ ಸಹಕಾರ ಇದ್ದೇ ಇರುತ್ತದೆ. ಇದನ್ನು ಉಪಯೋಗಿಸಿಕೊಂಡು ಅವರು ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದರು.
ಕೇಂದ್ರದ ಸಚಿವ ಸಂಪುಟದಲ್ಲಿ ರಾಜ್ಯದ ದಲಿತ ಹಾಗೂ ಒಬಿಸಿಗೆ ಪ್ರಾಮುಖ್ಯತೆ ಕೊಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದ ಬಿಜೆಪಿಗೆ ದಲಿತ, ಒಬಿಸಿ ಸಂಸದರು ಬೇಕಾಗಿಲ್ಲ ಎಂದು ಕಾಣುತ್ತದೆ. ರಾಜ್ಯದಿಂದ ದಲಿತ, ಒಬಿಸಿ ಸಮುದಾಯದವರೂ ಆಯ್ಕೆಯಾಗಿದ್ದಾರೆ. ಅವರಿಗೂ ಸಚಿವ ಸ್ಥಾನ ಕೊಡಬೇಕಿತ್ತು. ಈ ಎರಡೂ ಸಮುದಾಯಗಳನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಿದರು.