ಬೆಂಗಳೂರು, ಜೂ. 10 (DaijiworldNews/AK): ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಇದು ಅತ್ಯಂತ ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿದ ವ್ಯಕ್ತಿಯೊಬ್ಬರು ದೇಶದ ಪ್ರಧಾನಿಯಾಗಿ 3ನೇ ಬಾರಿ ಅಧಿಕಾರ ಸ್ವೀಕರಿಸಿದ್ದು, ಇದೊಂದು ಐತಿಹಾಸಿಕ ಪ್ರಮುಖ ವಿಚಾರ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮತ್ತು ಅವರ ಸಚಿವಸಂಪುಟಕ್ಕೆ ಅಭಿನಂದನೆಗಳು.ಪ್ರಧಾನಿಯಾದ ಬಳಿಕ ಅವರು ತಮ್ಮ ಪ್ರಥಮ ಆದ್ಯತೆಯನ್ನು ಕಿಸಾನ್ ಸಮ್ಮಾನ್ ನಿಧಿಯ ಹಣ ಬಿಡುಗಡೆ ಮೂಲಕ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ಸಂಬಂಧಿಸಿದ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆಗೆ ಅವರು ಮುಂದಾಗಿದ್ದು, ಇದಕ್ಕಾಗಿ ಅವರಿಗೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಮೋದಿಯವರ ಆಡಳಿತವು ಸಂವಿಧಾನವನ್ನು ಎತ್ತಿ ಹಿಡಿಯುವ ಮತ್ತು ಗೌರವ ಕೊಡುವ ಕೆಲಸವನ್ನು ಮಾಡುತ್ತಿದೆ. ದೇಶದ ಬೆನ್ನೆಲುಬಾದ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿಸಾನ್ ಸಮ್ಮಾನ್ ನಿಧಿಯಡಿ 9.3 ಕೋಟಿ ರೈತರಿಗೆ 20 ಸಾವಿರ ಕೋಟಿ ಮೊತ್ತವನ್ನು ಅವರು ಬಿಡುಗಡೆ ಮಾಡಿದ್ದು, ರೈತರ ಪರವಾಗಿ ಮೋದಿಜೀ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.