ಬೆಂಗಳೂರು, ಜೂ. 10(DaijiworldNews/AA): ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈಗಾಗಲೇ ಸಿಂಹ, ಹುಲಿ ಸಫಾರಿ ಇದ್ದು, ಇದರೊಂದಿಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಪ್ರಾರಂಭಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಇಂದು ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಮೈಸೂರು ಶ್ರೀ ಚಾಮರಾಜೇಂದ್ರ ಮಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಅಕ್ವೇರಿಯಂ ನಿರ್ಮಿಸಬೇಕು. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಯಿತು.
ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿ ನೀಡಲಾಯಿತು. ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಅಕ್ವೇರಿಯಂಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತಿಯ ಅಕ್ವೇರಿಯಂ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.
ಇನ್ನು ಈ ಸಭೆಯಲ್ಲಿ ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿ ರೋಗಗಳಿಂದ ಸಾವನ್ನಪ್ಪದಂತೆ ಸೂಕ್ತ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಯ ಕುರಿತು ಚರ್ಚಿಸಿ, ವೈದ್ಯರ ನೇಮಕಾತಿಗೆ ಅನುಮೋದಿಸಲಾಯಿತು.