ಬೆಂಗಳೂರು, ಜೂ.09(DaijiworldNews/AA): ವಾಲ್ಮೀಕಿ ನಿಗಮದ ಕೋಟ್ಯಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ "ಗುಂಡಿಗೆ ಹೋದ ಹೆಣ, ರಾಜ್ಯ ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ" ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಗುಂಡಿಗೆ ಹೋದ ಹೆಣ, ರಾಜ್ಯ ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ತಿಳಿದಿದ್ದರೂ ಕೊನೆ ಪ್ರಯತ್ನವಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ಕನ್ನಡಿಗರ ಪತ್ರ ಎಂದು ಉಲ್ಲೇಖಿಸಿ ಪತ್ರ ಬರೆದಿದ್ದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂ. ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಣತಿಯಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ. ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು ಈ ನೀಚ ಸರ್ಕಾರ ಉಂಡು ಹೋದ ಕೊಂಡು ಹೋದ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಖರ್ಚಿಗೆ ಸಾಗಿಸಿದ್ದಾರೆ ಎಂದು ತಿಳಿಸಲಾಗಿದೆ.