ಹೈದರಬಾದ್, ಜೂ 08 (DaijiworldNews/MS): ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್(87) ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್ನ ಸ್ಟಾರ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:45ಕ್ಕೆ ಕೊನೆಯುಸಿರೆಳೆದಿದ್ದಾರೆ. ಉಸಿರಾಟ ತೊಂದರೆಯಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸ್ಟೆಂಟ್ ಅಳವಡಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯ ತೀರಾ ಹದಗೆಟ್ಟು ಮುಂಜಾನೆ ಸಾವನ್ನಪ್ಪಿದ್ದಾರೆ.
ಸದ್ಯ ಪಾರ್ಥಿವ ಶರೀರವನ್ನು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ರಾಮೋಜಿ ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ. ಭಾರತ ಮಾಧ್ಯಮ ಲೋಕದಲ್ಲಿ ದೂರದೃಷ್ಟಿ ಹೊಂದಿದ್ದ ರಾಮೋಜಿ ರಾವ್ ಅವರ ನಿಧನ ತೀವ್ರ ದುಃಖವನ್ನುಂಟುಮಾಡಿದೆ.