ಬೆಂಗಳೂರು, ಜೂ. 07(DaijiworldNews/AA): ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಸಚಿವನ ಹೆಸರು ಮುನ್ನಲೆಗೆ ಬಂದಿದೆ.
ಹಗರಣ ಸಂಬಂಧ ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ಧ ಆರೋಪ ಕೇಳಿ ಬಂದಿದೆ. ಹೀಗಾಗಿ ಸಚಿವ ಶರಣಪ್ರಕಾಶ್ ಹಾಗೂ ದದ್ದಲ್ ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಒತ್ತಾಯ ಮಾಡುತ್ತಿದ್ದಾರೆ.
ಮೇ 24ರಂದು ಸಚಿವ ಶರಣಪ್ರಕಾಶ್ ಪಾಟೀಲ್ ಕೊಠಡಿಯಲ್ಲಿ ಸಭೆ ನಡೆದಿದೆ. ಈ ಸಂದರ್ಭ ಚಂದ್ರಶೇಖರ್ ಮತ್ತು ಪರಶುರಾಮ್ ಅವರು ನಿಗಮದ ಅಧ್ಯಕ್ಷ ದದ್ದಲ್ ಭೇಟಿ ಮಾಡಿದ್ದರು. ಹೀಗಾಗಿ ಚಂದ್ರಶೇಖರ್ ಸಾವಿಗೂ ಮುನ್ನ ದದ್ದಲ್ ಗೆ ಎಲ್ಲವೂ ತಿಳಿದಿತ್ತು ಎಂದು ಆರೋಪಿಸಲಾಗುತ್ತಿದೆ. ಜೊತೆಗೆ ಈ ಕುರಿತಾದ ಸಿಸಿಟಿವಿ ದೃಶ್ಯ ವಶಕ್ಕೆ ಪಡೆಯಲು ಸೂಚಿಸುವಂತೆ ವಕೀಲರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಹಗರಣ ಸಂಬಂಧ ಗುರುವಾರ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೊಬ್ಬ ಸಚಿವನ ರಾಜೀನಾಮೆ ವಿಚಾರ ಮುನ್ನಲೆಗೆ ಬಂದಿದೆ.