ಬೆಂಗಳೂರು, ಜೂ. 07(DaijiworldNews/AA): ಸಚಿವ ನಾಗೇಂದ್ರ ಅವರ ರಾಜೀನಾಮೆ ಮೊದಲೇ ಪಡೆಯಬೇಕಿತ್ತು. ರಾಜೀನಾಮೆ ಕೇಳಿಲ್ಲ ಎನ್ನುವುದು ಮುಖ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮಾಡುತ್ತಿರುವ ನಾಟಕ. ಹಗರಣದ ಹಿಂದೆ ದೊಡ್ಡವರ ಪಾತ್ರ ಇರುವ ಕಾರಣಕ್ಕೇ ಸಚಿವರ ರಾಜೀನಾಮೆ ಕೇಳುವ ಧೈರ್ಯ ಸಿಎಂಗೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್ನಲ್ಲೇ ಹಗರಣ ನಡೆದಿದ್ದು, ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ. ಅಧಿಕಾರಿ ಸಾವಿನ ಹಿನ್ನೆಲೆ ಈ ಪ್ರಕರಣ ಬಯಲಿಗೆ ಬಂದಿದೆ. ತೆಲಂಗಾಣ ಚುನಾವಣೆಗೆ ಹಣ ವರ್ಗಾವಣೆ ಆಗಿರುವ ಸಾಧ್ಯತೆ ಇದೆ. ಹಗರಣದ ಒಳಹೊಕ್ಕು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ದೆಹಲಿಗೆ ಹೋಗಿ ಸಚಿವನಾಗುವುದಕ್ಕಿಂತ ರಾಜ್ಯದ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನ ಪಡುತ್ತೇನೆ. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಕೇಂದ್ರಕ್ಕೆ ಯಾವ ಮುಜುಗರವನ್ನೂ ನಾನು ಮಾಡುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇನೆ. ರಾಜ್ಯದ ಎಲ್ಲಾ ಸಂಸದರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.