ಬೆಂಗಳೂರು, ಜೂ. 06(DaijiworldNews/AK):ವಿಧಾನಸೌಧದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಎಲ್ಲ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಜೊತೆಗೂಡಿ ರಾಜಭವನಕ್ಕೆ ತೆರಳಿ ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ನಾಗೇಂದ್ರರನ್ನು ವಜಾ ಮಾಡಲು ರಾಜ್ಯಪಾಲರಿಗೆ ಒತ್ತಾಯಿಸಿದರು.
ಸಿದ್ದರಾಮಯ್ಯ ಸರಕಾರಕ್ಕೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗುತ್ತ ಜನಪ್ರತಿನಿಧಿಗಳು ಕಾಲ್ನಡಿಗೆಯಲ್ಲಿ ತೆರಳಿದರು. ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ದುರುಪಯೋಗದ ಹಗರಣಕ್ಕೆ ಸಂಬಂಧಿಸಿ ನಾಗೇಂದ್ರರ ರಾಜೀನಾಮೆ ಪಡೆಯದೆ ಇರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಲಾಯಿತು. ಕೂಡಲೇ ನಾಗೇಂದ್ರರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಲಾಯಿತು.
ಕೊಡಲೇಬೇಕು, ಕೊಡಲೇಬೇಕು ರಾಜೀನಾಮೆ ಕೊಡಲೇಬೇಕು, ದಲಿತರ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಿದ ಸರಕಾರಕ್ಕೆ ಧಿಕ್ಕಾರ, ಭ್ರಷ್ಟ ಸಿದ್ದರಾಮಯ್ಯ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣೆಗಳನ್ನು ಮೊಳಗಿಸಲಾಯಿತು.ಸಚಿವರ ವಜಾಕ್ಕೆ ಆಗ್ರಹಿಸುವ ಫಲಕಗಳೊಂದಿಗೆ ಶಾಸಕರು, ಮುಖಂಡರು ಭಾಗವಹಿಸಿದ್ದರು.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಹಣವನ್ನು ಅಕ್ರಮವಾಗಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೆ ಭಯ ಇದ್ದಂತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.ಪ್ರಕರಣವನ್ನು ರಾಜ್ಯ ಸರಕಾರವು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕೆಂದೂ ಅವರು ಒತ್ತಾಯಿಸಿದರು. ದಲಿತರ ಅಭಿವೃದ್ಧಿಗಾಗಿ ಬಳಸಬೇಕಿದ್ದ ಹಣವನ್ನು ಹೈದರಾಬಾದ್ನಲ್ಲಿ 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ವರ್ಗಾಯಿಸಲಾಗಿದೆ ಎಂದೂ ಆಕ್ಷೇಪಿಸಿದರು. ಹಿಂದಿನಿಂದಲೂ ನಾವು ಸಚಿವರ ರಾಜೀನಾಮೆ ಪಡೆಯಲು ಆಗ್ರಹಿಸಿದ್ದೆವು. ಆದರೂ ಅವರು ಸ್ಪಂದಿಸಿಲ್ಲ ಎಂದು ಟೀಕಿಸಿದರು.