ಶಿರಸಿ,ಮೇ11(DaijiworldNews/AZM):ಬಡಗುತಿಟ್ಟಿನ ಭಾಗವತಿಕೆಯಲ್ಲಿ ದೊಡ್ಡ ಹೆಸರಾಗಿದ್ದ ನೆಬ್ಬೂರು ನಾರಾಯಣ ಭಾಗವತರು (82) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಕೆರೆಮನೆ ಶಿವರಾಮ ಹೆಗಡೆಯವರ ಗರಡಿಯಲ್ಲಿ ಬೆಳೆದ ನೆಬ್ಬೂರರು, ಹಿರಿಯ ಕಲಾವಿದರ ಒಡನಾಟದಲ್ಲಿ, ಅಭ್ಯಾಸ ಮಾಡುತ್ತ ಮುಂದೆ, ಕೆರೆಮನೆ ಮೇಳದ ಪ್ರಧಾನ ಭಾಗವತರಾಗಿ ಸುಮಾರು 50 ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ಅನೇಕ ಆಖ್ಯಾನಗಳ ಯಶಸ್ವಿ ಪ್ರದರ್ಶನಕ್ಕೆ ಕಾರಣರಾದವರು.
ಸಿದ್ದಾಪುರ ತಾಲ್ಲೂಕು ನೆಬ್ಬೂರಿನ ಗಣಪಿ ಮತ್ತು ದೇವರು ಹೆಗಡೆ ದಂಪತಿಯ ನಾಲ್ವರು ಮಕ್ಕಳಲ್ಲಿ ನಾರಾಯಣ ಎರಡನೆಯವರು. ನಾರಾಯಣರವರಿಗೆ ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಾಳಮದ್ದಳೆಯಲ್ಲಿ ಶ್ರೀಕೃಷ್ಣ ಸಂಧಾನದ ವಿದುರ, ಅತಿಕಾಯ ಕಾಳಗದ ಸುಗ್ರೀವ, ಭೀಷ್ಮಪರ್ವದ ಧರ್ಮರಾಯ ಮೊದಲಾದ ಪಾತ್ರಗಳನ್ನು ನೆಬ್ಬೂರರು ನಿರ್ವಹಿಸಿದ್ದರು. ಆಗ ನಾರಾಯಣ ಭಾಗವತರನ್ನು ಮಾಸ್ತರರು, ನಾಣಿ ಎಂದು ಕರೆಯುತ್ತಿದ್ದರಂತೆ. ಆ ಹೆಸರು ಕೊನೆಯ ತನಕವೂ ಇತ್ತು. ಸ್ಥಳೀಯವಾಗಿ ಅವರನ್ನು ನಾಣಿ ಭಾಗವತರು ಎಂದೇ ಕರೆಯುತ್ತಿದ್ದರು.
ಕೆರೆಮನೆ ತಂಡದೊಂದಿಗೆ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದ್ದ ನೆಬ್ಬೂರು ಭಾಗವತರು ಮೊದಲಬಾರಿಗೆ 1984ರಲ್ಲಿ ಬಹ್ರೈನ್ಗೆ ತೆರಳಿದ್ದರು. ಕೆರೆಮನೆ ಶಿವಾನಂದ ಹೆಗಡೆ ಅವರ ನೇತೃತ್ವದಲ್ಲಿ ಅಮೆರಿಕ, ಲಂಡನ್, ನೇಪಾಳ, ಚೀನಾ, ಫ್ರಾನ್ಸ್, ಸ್ಪೇನ್, ಬಾಂಗ್ಲಾ, ಸಿಂಗಪೂರ್, ಬರ್ಮಾ, ಲಾವೋಸ್ ಮೊದಲಾದ ದೇಶಗಳಿಗೆ ತೆರಳಿ ಅಲ್ಲಿನ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಲ್ಲಿ ತೇಲಾಡಿಸಿದರು.
1996ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, 2002ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2006ರಲ್ಲಿ ಶೇಣಿ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗಳಿಗೆ ನೆಬ್ಬೂರ ನಾರಾಯಣ ಭಾಗವತರು ಪಾತ್ರರಾಗಿದ್ದರು.