ಹುಬ್ಬಳ್ಳಿ, ಮೇ09(Daijiworld News/SS): ಕುಂದಗೋಳ ಉಪ ಚುನಾವಣಾ ಪ್ರಚಾರದಲ್ಲಿ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಗೆಳೆಯ ಶಿವಳ್ಳಿಯನ್ನು ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಕುಂದಗೋಳ ವಿಧಾನಸಭೆ ಉಪಚುನಾವಣೆಯ ಪ್ರಚಾರದ ಉಸ್ತುವಾರಿ ಹೊತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಇಂದು ಇಂಗಳಗಿ ಗ್ರಾಮದಲ್ಲಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತಪ್ರಚಾರ ನಡೆಸಿದ್ದರು.
ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ಮೃತ ಸಿ.ಎಸ್.ಶಿವಳ್ಳಿಯವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ನಿಮ್ಮ ಮುಂದೆ ನಿಂತು ಮತಯಾಚನೆ ಮಾಡುತ್ತಿದ್ದೇನೆ. ಇದು ಶಿವಳ್ಳಿ ಚುನಾವಣೆಯಲ್ಲ. ನಿಮ್ಮ ಚುನಾವಣೆ. ನಿಮ್ಮೆಲ್ಲರ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ. ಶಿವಳ್ಳಿಯನ್ನು ಉಳಿಸಿಕೊಳ್ಳಿ ಎಂದು ಅಳುತ್ತಲೇ ಹೇಳಿದ್ದಾರೆ.
ನನ್ನ ಸ್ನೇಹಿತ ಸಿ.ಎಸ್.ಶಿವಳ್ಳಿ ಜಾತಿ ರಾಜಕಾರಣ ಮಾಡಿಲ್ಲ, ಯಾರಿಗೂ ಕೆಟ್ಟದ್ದು ಮಾಡಿಲ್ಲ, ಕಿರುಕುಳ ನೀಡಿಲ್ಲ. ಅವರ ಮನೆಗೆ ಹೋದರೆ ತುಂಬ ಅಭಿಮಾನ, ಗೌರವದಿಂದ ಕಾಣುತ್ತಿದ್ದ. ಅವರ ನಿಧನದ ಬಳಿಕ ಕುಸುಮಕ್ಕ ನಮ್ಮ ಮನೆಗಾಗಲಿ, ದಿನೇಶ್ ಗುಂಡೂರಾವ್ ಅವರ ಮನೆಗಾಗಲೀ ಬಂದು ಚುನಾವಣೆಯಲ್ಲಿ ಸೀಟು ಕೊಡಿ ಎಂದು ಕೇಳಲಿಲ್ಲ. ಕಾರ್ಯಕರ್ತರೇ ನಿರ್ಧರಿಸಿದ್ದಾರೆ. ಕುಸುಮಕ್ಕನನ್ನು ಗೆಲ್ಲಿಸಿಕೊಡಿ ಎಂದು ಹೇಳುತ್ತ ಭಾವುಕರಾದರು.
ನನ್ನ ಕ್ಷೇತ್ರವನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೋ, ಹಾಗೇ ಕುಂದಗೋಳವನ್ನೂ ನೋಡಿಕೊಳ್ಳುತ್ತೇನೆ. ನಾನು ಮತಕ್ಕಾಗಿ ಕಣ್ಣೀರು ಹಾಕುವವನಲ್ಲ. ಶಿವಳ್ಳಿ ಜತೆಗಿನ ನನ್ನ ಸ್ನೇಹ ಹಾಗಿತ್ತು ಎಂದು ಹೇಳಿದರು.
ಪಾಪ ಶಿವಳ್ಳಿ ಪತ್ನಿ ಕುಸುಮಾ ಅವರು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಗೊಳಿಸಿ ಎಂದು ವಿನಂತಿಸಿದರು.