ಪುರುಲಿಯಾ, ಮೇ 09 (Daijiworld News/MSP): ಮಮತಾ ಬ್ಯಾನರ್ಜಿ ಅವರೇ ನಿಮ್ಮನ್ನು ನಾನು 'ದೀದಿ' ಎಂದು ಕರೆಯುವ ಮೂಲಕ ನಿಮಗೆ ಗೌರವ ನೀಡುತ್ತೇನೆ. ನೀವು ನನಗೆ ಕಪಾಳಮೋಕ್ಷ ಮಾಡಿದರೆ ಅದು ನನಗೆ ಆಶೀರ್ವಾದದಂತೆ. ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿಗೆ ಪ್ರಜಾಸತ್ತೆಯ ಬಲವಾದ ಕಪಾಳಮೋಕ್ಷವಾಗಬೇಕು ಎಂದು ಹೇಳಿದ್ದರು.
ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಬಿಜೆಪಿ ಸಮಾವೇಶದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಪ್ರಧಾನಿ, ದೀದಿ ನನಗೆ ಕಪಾಳಮೋಕ್ಷ ಮಾಡಬೇಕು ಎಂದು ಹೇಳಿದ್ದಾರೆ ಎಂದು ಕೇಳಿದ್ದೇನೆ. ಆದರೆ ನಾನು ಅವರನ್ನು ಮಮತೆಯಿಂದ ದೀದಿ ಎಂದು ಕರೆಯುತ್ತೇನೆ. ನಿಮ್ಮ ಏಟು ನನಗೆ ಆಶೀರ್ವಾದವಿದ್ದಂತೆ
ಆದರೆ ಚಿಟ್ ಫಂಡ್ ಹೆಸರಲ್ಲಿ ಬಡವರಿಂದ ಹಣ ದೋಚಿದವರಿಗೂ ಕಪಾಳಮೋಕ್ಷ ಮಾಡುವ ಧೈರ್ಯ ನಿಮಗೆ ಇದೆಯಾ ? ದಂಧೆಕೋರರ ಕೆನ್ನೆಗೆ ಹೊಡೆಯುವ ಧೈರ್ಯ ನಿಮಗೆ ಇದೆಯಾ ? ಎಂದು ಪ್ರಧಾನಿ ಮೋದಿ ಮಮತಾ ವಿರುದ್ಧ ಚಾಟಿ ಬೀಸಿದ್ದಾರೆ.