ಮುಂಬೈ, ಜೂ. 02(DaijiworldNews/AK): 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಕೊಲೆ ಮಾಡಿರುವ ಘಟನೆ ಭಾನುವಾರ ಜೊಲ್ಲಾಪುರದ ಕಲಾಂಬಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನ ಬಾತ್ರೂಮ್ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಾಗ್ವಾದ ನಡೆದು ಇತರ ಕೈದಿಗಳು 59 ವರ್ಷದ ಮನ್ನಾ ಅಲಿಯಾಸ್ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ ಕುಮಾರ್ ಭವರ್ಲಾಲ್ ಗುಪ್ತಾನನ್ನು ಕೊಲೆ ಮಾಡಿದ್ದಾರೆ.
ಮೊಹಮ್ಮದ್ ಅಲಿ ಖಾನ್ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ. ಮೊಹಮ್ಮದ್ ಅಲಿ ಖಾನ್ ಹಾಗೂ ಕೆಲ ವಿಚಾರಣಾಧೀನ ಕೈದಿಗಳ ನಡುವೆ ಇದ್ದಕ್ಕಿದ್ದಂತೆ ವಾಗ್ವಾದ ನಡೆದಿದೆ. ಈ ವೇಳೆ ಒಳಚರಂಡಿಯಲ್ಲಿಟ್ಟಿದ್ದ ಕಬ್ಬಿಣದ ರಾಡ್ನಿಂದ ಖಾನ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ತೀವ್ರ ರಕ್ತಸ್ತ್ರಾವದಿಂದ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಖಾನ್ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
1993ರ ಮಾರ್ಚ್ 12 ರಂದು ಮುಂಬೈನಲ್ಲಿ ಒಂದೇ ದಿನ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಸಾವುಗಳು ಸಂಭವಿಸಿತ್ತು. 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.