ಶಿವಮೊಗ್ಗ, ಜೂ 01(DaijiworldNews/AA): ನೈರುತ್ಯ ಪದವೀಧರ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿರುವ ಅನುಭವಿ, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಮಣಿಸಲು ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಡಾ.ಧನಂಜಯ ಸರ್ಜಿ ಅವರು ಕಣಕ್ಕಿಳಿದಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಹೊನ್ನಾಳಿ ವ್ಯಾಪ್ತಿಯನ್ನು ಒಳಗೊಂಡಿರುವ ವಿಶಾಲ ಕ್ಷೇತ್ರವಾಗಿದ್ದು, ಈ ಬಾರಿ ಈ ಕ್ಷೇತ್ರದಲ್ಲಿ 11 ಮಂದಿ ಸ್ಪರ್ಧಿಸುತ್ತಿದ್ದಾರೆ. ಹಳೇ ಹುಲಿ ಆಯನೂರು ಮಂಜುನಾಥ್ ಹಾಗೂ ಎನ್ಡಿಎ ಅಭ್ಯರ್ಥಿ ಡಾ.ಧನಂಜಯ ಸರ್ಜಿ ನಡುವೆ ನೇರ ಹಣಾಹಣಿ ಏರ್ಪಪಟ್ಟಿದೆ.
ಆಯನೂರು ಮಂಜುನಾಥ ಅವರು ಈ ಹಿಂದೆ ಲೋಕಸಭಾ ಸದಸ್ಯ, ಶಾಸಕ, ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯಸಭಾ ಸದಸ್ಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುತ್ತಾರೆ. ಅವರು ತನ್ನ ಅಧಿಕಾರವಧಿಯಲ್ಲಿ ಯಾವ ಉದ್ದಿಮೆಯನ್ನೂ ನಡೆಸದ ಓರ್ವ ಅಪರೂಪದ ರಾಜಕಾರಣಿಯಾಗಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಅವರು, ಸುಮಾರು 47 ವರ್ಷಗಳಿಗಿಂತ ಹೆಚ್ಚು ಕಾಲ ಅವಿರತ ಹೋರಾಟ ನಡೆಸಿರುತ್ತಾರೆ. ಕಾರ್ಮಿಕ ಸಂಘಟನೆಯ ಮುಖಂಡನಾಗಿ ಬೆಳೆದು ಬಂದ ಅವರು, ಈಗಲೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕೆಂದು ದೊಡ್ಡ ಹೋರಾಟ ನಡೆಸುತ್ತಿದ್ದಾರೆ.
ಲೋಕಸಭಾ ರಾಜ್ಯಸಭಾ ಸದಸ್ಯ ಅವಧಿಯಲ್ಲಿ ಆಯನೂರು ಮಂಜುನಾಥ ಅವರು ಆಹಾರ ನಿಗಮದ ಅಧ್ಯಕ್ಷ, ಪ್ರವಾಸೋದ್ಯಮ, ಸಾರಿಗೆ, ಕೇಂದ್ರದ ಕಾರ್ಮಿಕ ನೌಕರರಿಗೆ ಸಂಬಂಧಪಟ್ಟ ತ್ರಿಪಕ್ಷೀಯ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿ, ಆಯಾ ಕ್ಷೇತ್ರಗಳ ಪರಿಣಿತರಿಂದ ಮೆಚ್ಚುಗೆ ಗಳಿಸಿರುತ್ತಾರೆ. ಇನ್ನು ಕಳೆದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೇಲ್ಮನೆಗೆ ಆಯ್ಕೆಯಾಗಿದ್ದ ಆಯನೂರು ಮಂಜುನಾಥ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಮತದಾರರು ಈ ಬಾರಿಯೂ ತಮ್ಮನ್ನು ಕೈ ಬಿಡದೇ ತನ್ನನ್ನು ಗೆಲ್ಲಿಸಲಿದ್ದಾರೆ ಎಂಬ ಭರವಸೆಯಲ್ಲಿರುವ ಅವರು ಕ್ಷೇತ್ರದ 6 ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.