ತೀರ್ಥಹಳ್ಳಿ, ಜೂ 01(DaijiworldNews/AA): ಹಣ ವರ್ಗಾವಣೆ ಆಗಿರುವುದೇ ಬಹಳ ದೊಡ್ಡ ಹಗರಣದ ಸಂಕೇತವಾಗಿರುವುದರಿಂದ ಸಿಬಿಐ ತನಿಖೆಯಾಗಬೇಕು. ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಣ್ಣು ಮುಚ್ಚಲು ಎಸ್ಐಟಿ ರಚನೆ ಮಾಡಿದ್ದಾರೆ. ಎಸ್ಐಟಿ ಎನ್ನುವುದು ಸಿಎಂ ಸಿದ್ದರಾಮಯ್ಯನವರ ಒಂದು ನಾಟಕವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಚಂದ್ರಶೇಖರ್ ಆತ್ಮಹತ್ಯೆ ಕೇಸ್ ಸಂಬಂಧ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿಯನ್ನು ನಾವು ಒಪ್ಪುವುದಿಲ್ಲ. ಈ ಹಗರಣವನ್ನು ಸಿಬಿಐಗೆ ವರ್ಗಾಯಿಸಬೇಕು. ಈ ರೀತಿಯಾಗಿ ದಲಿತರ ಹಣ ದುರುಪಯೋಗವಾಗುತ್ತಿರುವುದು ಅಮಾನವೀಯ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ನವರ ಲೂಟಿಯಿಂದಾಗಿ ಇನ್ನೂ ಎಷ್ಟು ಮಂದಿ ಅಧಿಕಾರಿಗಳು ಸಾವನ್ನಪ್ಪುತ್ತಾರೋ ತಿಳಿದಿಲ್ಲ. ವರ ಮೇಲೆ ಮರ್ಡರ್ ಕೇಸ್ ದಾಖಲಿಸಬೇಕು ಅವರಿಂದಲೇ ಸತ್ತಿದ್ದು. ಅವರ ನಿರ್ದೇಶನದಿಂದಲೇ ಹೀಗೆ ಆಗಿರುವುದು. ಅವರಿಗೆ ನಿರ್ದೇಶನ ನೀಡಿದ್ದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್. ತೆಲಂಗಾಣ ಚುನಾವಣೆಗೆ ಹಣವನ್ನು ಲೂಟಿ ಮಾಡಿದ್ದಾರೆ. ಈ ಹಿಂದೆಯಿಂದಲೂ ಹೇಳುತ್ತಿದ್ದೆವು ಇದು ಎಟಿಎಂ ಸರ್ಕಾರ ಎಂದು ಅದನ್ನು ಅವರು ಸಾಬೀತುಪಡಿಸಿದ್ದಾರೆ. ನಮ್ಮ ಹೋರಾಟ ಇನ್ನು ಮುಂದುವರೆಯುತ್ತದೆ ಎಂದು ಹೇಳಿದರು.