ನವದೆಹಲಿ, ಜೂ 01(DaijiworldNews/AA): ಇಂದು ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಮತ್ತೆ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಮುಂಬೈ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾದ ಬಳಿಕ ವಿಮಾನ ಸಿಬ್ಬಂದಿ ಪ್ರೊಟೋಕಾಲ್ ಅನುಸರಿಸಿದರು. ಭದ್ರತಾ ಏಜೆನ್ಸಿ ಮಾರ್ಗಸೂಚಿಗಳ ಅನುಸಾರ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲಾ ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ, ವಿಮಾನವನ್ನು ಟರ್ಮಿನಲ್ಗೆ ಹಿಂತಿರುಗಿ ತರಲಾಗುತ್ತದೆ ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ.
ಇದು ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ 2ನೇ ಘಟನೆಯಾಗಿದ್ದು, ಈ ಹಿಂದೆ ಮೇ 28 ರಂದು ಕೂಡ ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನಕ್ಕೆ ಇದೇ ರೀತಿಯಾದ ಬಾಂಬ್ ಬೆದರಿಕೆ ಬಂದಿತ್ತು. ಬೆದರಿಕೆ ಬಂದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ನಿರ್ಗಮನದ ಮೂಲಕ ಸ್ಥಳಾಂತರಿಸಲಾಗಿತ್ತು.
ಸುರಕ್ಷತಾ ಮಾರ್ಗಸೂಚಿಗಳ ಅನುಸಾರ ಸ್ಥಳಾಂತರಿಸುವಿಕೆಯನ್ನು 90 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಜೊತೆಗೆ ಈ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತಮ್ಮ ಯಾವುದೇ ಬ್ಯಾಗ್ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ದೆಹಲಿ ಘಟನೆಯಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದ ಹಿನ್ನೆಲೆ ಇಂಡಿಗೋ ಇಬ್ಬರು ಪೈಲಟ್ಗಳು ಮತ್ತು ನಾಲ್ವರು ಕ್ಯಾಬಿನ್ ಸದಸ್ಯರನ್ನು ಕೆಲಸದಿಂದ ವಜಾಗೊಳಿಸಿತ್ತು.