ಚೆನ್ನೈ, ಮೇ.31(DaijiworldNews/AK): ತಾಯಿಯ ಎದೆಹಾಲು ಮಾರಾಟ ಮಾಡುತ್ತಿದ್ದ ಜಾಲವೊಂದು ಚೆನ್ನೈ ನಲ್ಲಿ ಪತ್ತೆಯಾಗಿದೆ.ಪ್ರತಿ 100 ಮಿಲಿ ತಾಯಿಯ ಎದೆಹಾಲನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದ ಮಳಿಗೆಯೊಂದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸೀಲ್ ಮಾಡಿದ್ದು, ವೈಜ್ಞಾನಿಕ ತನಿಖೆಗಾಗಿ ಮಾದರಿಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಯಂದಿರ ಎದೆಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ 10 ದಿನಗಳಿಂದ ತೀವ್ರ ನಿಗಾ ವಹಿಸಿದ್ದ ಅಧಿಕಾರಿಗಳು ಶುಕ್ರವಾರ (ಇಂದು) ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 100 ಮಿಲಿ ಬಾಟಲಿಗಳಲ್ಲಿ ಸಂಗ್ರಹಿಸಿದ್ದ ಮಾನವರ ಎದೆಹಾಲು ಹಾಗೂ ದಾನಿ ತಾಯಂದಿರಿಂದ ಪಡೆದ ಹಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹಾಲನ್ನು ಪ್ಯಾಕಿಂಗ್ ಮಾಡುವುದಕ್ಕೆ ಯಾವ ವಿಧಾನಗಳನ್ನು ಅನುಸರಿಸಿದ್ದಾರೋ ನಮಗೆ ತಿಳಿದಿಲ್ಲ. ಈ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಸಿ, ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ
ಸದ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ತಾಯಿಯ ಎದೆಹಾಲು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅಗತ್ಯವಿದ್ದರೆ, ಅದನ್ನು ಸಂಗ್ರಹಿಸಿ ವೈದ್ಯರ ಸಲಹೆ ಮತ್ತು ಮೇಲ್ವಿಚಾರಣೆ ಮೇರೆಗೆ ಶಿಶುಗಳಿಗೆ ನೀಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.