ಬೆಂಗಳೂರು,ಮೇ.31(DaijiworldNews/AA): ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ. ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಆರ್ ಅಶೋಕ್ಗೆ ತಿರುಗೇಟು ನೀಡಿದ್ದಾರೆ.
ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳಿಗೆ ಕೇರಳದ ಮಲಯಾಳಿ ಹುಡುಗರನ್ನು ಚಾಲಕರನ್ನಾಗಿ ನೇಮಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆರ್ ಅಶೋಕ್ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಸ್ವಾಮಿ ವಿರೋಧ ಪಕ್ಷದ ನಾಯಕರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆಯಾಗಿದೆ. ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗ ಸತ್ಯದ ಮಾತುಗಳನ್ನು ಕೇಳುವಂತವರಾಗಿ ಅಶೋಕ್ ಅವರೇ, ಪ್ರಪ್ರಥಮವಾಗಿ ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯು ಕೇಂದ್ರ ಬಿಜೆಪಿ ಸರ್ಕಾರದ ನೀತಿ ಯೋಜನೆಯಂತೆ ಜಾರಿಯಾಗಿದೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿ ಮಾಡುವಂತಿಲ್ಲ. ಖಾಸಗಿ ಕಂಪನಿಯವರು ಮಾಲೀಕತ್ವ ಹೊಂದಿರುತ್ತಾರೆ. ಅವರಿಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ನೇರವಾಗಿ ಕೊಡುತ್ತದೆ. ಹಾಗೂ ಚಾಲಕರನ್ನು ನಿಯೋಜಿಸುವ ಹೊಣೆಯನ್ನು ಖಾಸಗಿ ಅವರಿಗೆ ವಹಿಸಲಾಗಿದೆ. ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್ಸುಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು. ಈ ವಿಷಯವನ್ನು ಹತ್ತು ಹಲವಾರು ಬಾರಿ ನಮ್ಮ ಸಾರಿಗೆ ಸಚಿವರು ಪ್ರತಿಯೊಂದು ವೇದಿಕೆಯಲ್ಲಿಯೂ ಸ್ಪಷ್ಟಪಡಿಸಿರುತ್ತಾರೆ. ತಮಗೆ ಅದು ಅರ್ಥವಾಗದಿರುವುದು ನಿಜಕ್ಕೂ ಶೋಚನೀಯ ಎಂದು ಪೋಸ್ಟ್ ಮಾಡಿದ್ದಾರೆ.