ಬೆಂಗಳೂರು, ಮೇ 30 (DaijiworldNews/AK):ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಇಬ್ಬರೋ ಮೂವರೋ ಅಧಿಕಾರಿಗಳ ಅಮಾನತು ಮಾಡಿದರೆ ಸಾಲದು. ಸಮಯ ವ್ಯರ್ಥ ಮಾಡದೇ ಸಚಿವರ ರಾಜೀನಾಮೆ ಪಡೆಯಬೇಕು. ಇದರ ತನಿಖೆಯನ್ನು ಸಿಬಿಐಗೆ ಕೊಡಲೇಬೇಕು. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿಜವಾಗಲೂ ನೀವು ಪ್ರಾಮಾಣಿಕರಿದ್ದರೆ ಇದನ್ನು ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.ಮೃತರ ಪತ್ನಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಗಂಡುಮಕ್ಕಳಿದ್ದು, ಸಂಸಾರ ನಡೆಸಲು ಕಷ್ಟ. ಇಂಥ ಸಂದರ್ಭದಲ್ಲಿ ರಾಜ್ಯ ಸರಕಾರ ಕನಿಷ್ಠ 25 ಲಕ್ಷ ಪರಿಹಾರವನ್ನು ಘೋಷಿಸಬೇಕು ಎಂದರು. ಮಾನವೀಯತೆ ದೃಷ್ಟಿಯಿಂದ ಕುಟುಂಬಕ್ಕೆ ಈ ಮೊತ್ತ ಕೊಡಬೇಕೆಂದು ತಿಳಿಸಿದರು.
ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಲು ಸಿಐಡಿ ಅಥವಾ ಸ್ಥಳೀಯ ಅಧಿಕಾರಿಗಳಿಂದ ಅಸಾಧ್ಯ. ಅಧಿಕಾರಿಗಳು ಮನೆಯಿಂದ ಪೆನ್ ಡ್ರೈವ್, ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ. ಇದು ಯಾವ ರೀತಿ ದುರುಪಯೋಗ ಆಗಲಿದೆ ಎಂಬುದು ನನಗಂತೂ ಗೊತ್ತಿಲ್ಲ ಎಂದು ಆರೋಪಿಸಿದರು.
ನಿನ್ನೆ ದಿನ ಮತ್ತೊಂದು ಎಫ್ಐಆರ್ ಮಾಡಿ ಬ್ಯಾಂಕ್ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ನೂರಾರು ಕೋಟಿ ಮೊತ್ತವನ್ನು ಮತ್ತೊಂದು ನಕಲಿ ಬ್ಯಾಂಕ್ ಖಾತೆ ಮೂಲಕ ತೆಲಂಗಾಣ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ನುಡಿದರು.
ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಭಂಡತನ ತೋರಿಸುವ ಅಗತ್ಯವಿಲ್ಲ. ಈ ಸರಕಾರ ತನ್ನ ಭಂಡತನ ಬಿಟ್ಟು, ನೀವು ಪ್ರಾಮಾಣಿಕರಿದ್ದರೆ ರಾಜೀನಾಮೆ ಪಡೆಯಿರಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಸಿಎಂ ಮತ್ತು ರಾಜ್ಯ ಸರಕಾರಕ್ಕೆ ಒಂದು ವಾರದ ಗಡುವು ಕೊಡುತ್ತಿದ್ದೇವೆ. ಅದರ ಒಳಗಡೆ ರಾಜೀನಾಮೆ ಪಡೆದು ಸಿಬಿಐ ತನಿಖೆಗೊಪ್ಪಿಸುವ ವಿಶ್ವಾಸವಿದೆ. ಇಲ್ಲದಿದ್ದರೆ, ರಾಜ್ಯಾದ್ಯಂತ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಬಿ.ವೈ. ವಿಜಯೇಂದ್ರ ಅವರು ಎಚ್ಚರಿಕೆ ನೀಡಿದರು.
ಇಲಾಖೆಯ ಸಂಬಂಧಿತ ಸಚಿವರ ಕಚೇರಿಯಿಂದ ದೂರವಾಣಿ ಕರೆ, ಒತ್ತಡ ಹಾಕಿರುವುದನ್ನು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಅವರು ಡೆತ್ ನೋಟಿನಲ್ಲಿ ಉಲ್ಲೇಖಿಸಿದ್ದಾರೆ. ಇಲಾಖಾ ಸಚಿವ ನಾಗೇಂದ್ರರ ಅನುಮತಿ ಇಲ್ಲದೇ ಅಧಿಕಾರಿಗಳು ಇಷ್ಟು ದೊಡ್ಡ ಮೊತ್ತವನ್ನು ಹೊರರಾಜ್ಯ ತೆಲಂಗಾಣಕ್ಕೆ ವರ್ಗಾವಣೆ ಮಾಡಿರುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಿದರು.