ಬೆಂಗಳೂರು, ಮೇ 29 (DaijiworldNews/ AK): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಇಲಾಖಾ ಸಚಿವ ನಾಗೇಂದ್ರ ಅವರು ಕೂಡಲೇ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ತನಿಖಾ ಸಂಸ್ಥೆಗಳಿಂದ ಇದರ ಸಮಗ್ರ ನಿಷ್ಪಕ್ಷಪಾತ ತನಿಖೆ ಮಾಡಲು ಅಸಾಧ್ಯ. ಆದ್ದರಿಂದ ಕೇಂದ್ರ ಸರಕಾರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಮಂತ್ರಿಗಳ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಬರೆದಿದ್ದಾರೆ. ಹಾಗಾದರೆ ಎಫ್ಐಆರ್ನಲ್ಲಿ ಸಚಿವರ ಹೆಸರು ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಸರಕಾರದ ಅಧೀನ ಸಂಸ್ಥೆಯಾದ ಸಿಐಡಿಯವರು ಮುಖ್ಯಮಂತ್ರಿಗಳು, ಸಚಿವರ ಬಗ್ಗೆ ತನಿಖೆ ಮಾಡಲು ಎಷ್ಟರಮಟ್ಟಿಗೆ ಸಾಧ್ಯ ಎಂದ ಅವರು, ನೈತಿಕತೆ ಇದ್ದರೆ ಸಚಿವರು ರಾಜೀನಾಮೆ ಕೊಡಬೇಕಿತ್ತು ಎಂದು ತಿಳಿಸಿದರು.
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಖಜಾನೆಯನ್ನೇ ಲೂಟಿ ಮಾಡಿದ ದೊಡ್ಡ ಹಗರಣವಿದು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲುದರೋಡೆ. 187 ಕೋಟಿ ರೂ. ಹಗರಣದ ವಿಚಾರ ಗೊತ್ತಿದ್ದೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತ ಸರಕಾರವಿದು. ಹಗರಣದಲ್ಲಿ ಸಂಪೂರ್ಣವಾಗಿ ಭಾಗಿ ಆಗಿದ್ದರಿಂದಲೇ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಮೃತರ ಬಳಿ ಇದ್ದ ಪೆನ್ ಡ್ರೈವ್ ಮತ್ತು ಲ್ಯಾಪ್ ಟಾಪಿನಲ್ಲಿದ್ದ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು. ಸತ್ಯವಂತರು ಎಂದು ಹೇಳಿಕೊಳ್ಳುವ ಇವರು ತನಿಖೆಗೆ ಮುಂದಾಗಬೇಕು ಎಂದು ತಿಳಿಸಿದರು. ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ 24 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳೇ ಹೊರಬೇಕು ಎಂದು ಒತ್ತಾಯಿಸಿದರು.