ಶಿಮ್ಲಾ, ಮೇ 26 (DaijiworldNews/AK): ಅಗ್ನಿಪಥ್ ಯೋಜನೆ ಕುರಿತು ಸುಳ್ಳು ಪ್ರಚಾರ ಮಾಡುವ ಮೂಲಕ ದೇಶದ ಯುವಕರನ್ನು ದಾರಿ ತಪ್ಪಿಸುವುದೇ ಕಾಂಗ್ರೆಸ್ನ ಗುರಿಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹಮೀರ್ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಯುವಜನತೆಗೆ 100% ಉದ್ಯೋಗ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯು ಸಶಸ್ತ್ರ ಪಡೆಗಳಿಗೆ ಸೇರುವ ಯುವಕರನ್ನು ದೇಶಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಇಂತಹ ಯೋಜನೆ ಬಗ್ಗೆ ಸುಳ್ಳು ಹೇಳುವ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯ ಸರ್ಕಾರಗಳು ಈ ಯುವ ಸೈನಿಕರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ 10-20% ರಷ್ಟು ಮೀಸಲಾತಿ ಕಲ್ಪಿಸಿವೆ. ಕೇಂದ್ರದ ಅರೆಸೇನಾ ಪಡೆಗಳಲ್ಲೂ ಮೀಸಲಾತಿ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ, ಆಯ್ಕೆಯಲ್ಲಿ ಹಲವು ರಿಯಾಯಿತಿಗಳನ್ನು ನೀಡಿದೆ. ಕಾಂಗ್ರೆಸ್ ಯುವಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಬೇಕು ಮತ್ತು ಅವರ ಭವಿಷ್ಯದ ಜೊತೆ ಆಟವಾಡಬಾರದು ಎಂದು ಅವರು ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಇಚ್ಛೆಗೆ ವಿರುದ್ಧವಾಗಿ ಅಗ್ನಿಪಥ ಯೋಜನೆಯನ್ನು ತರಲಾಗಿದೆ. ಐ.ಎನ್.ಡಿ.ಐ.ಎ ಬಣ ಅಧಿಕಾರಕ್ಕೆ ಬಂದರೆ, ಪಕ್ಷವು ತಕ್ಷಣವೇ ಅದನ್ನು ತಿರಸ್ಕರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.