ಮೈಸೂರು, ಮೇ 26 (DaijiworldNews/AA): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತಕ್ಕೆ ಒಂದು ವರ್ಷ ತುಂಬಿದೆ. ಆದರೆ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೋಲಿಸ್ ಠಾಣೆಗೆ ಕಿಡಿಗೇಡಿಗಳು ನುಗ್ಗಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಜಿದ್ದಾರೆ. ಇವರಿಗೆ ಈ ನೆಲದ ಕಾನೂನಿಗೆ ಗೌರವ ಇಲ್ಲದಂತಾಗಿದೆ. ಕಾನೂನು ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಗೃಹ ಸಚಿವರು ಅಸಮರ್ಥರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕಿಯಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಮಟ್ಕಾ ಆಡಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರ ವಿಚಾರಣೆಗೆ ವಶದಲ್ಲಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಚನ್ನಗಿರಿಯಲ್ಲಿ ನಡೆದಿತ್ತು. ಇದನ್ನು ಲಾಕಪ್ ಡೆತ್ ಆರೋಪ ಮಾಡಿ ಮೃತನ ಸಂಬಂಧಿಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಜೀಪ್ ಹಾನಿಗೊಳಿಸಿದ್ದರು. ಈ ಘಟನೆಯಲ್ಲಿ 11ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು.