ನವದೆಹಲಿ, ಮೇ 26 (DaijiworldNews/AA): ಛತ್ತೀಸಗಢ ರಾಜ್ಯದ ಒಂದು ಸಣ್ಣ ಪ್ರದೇಶವನ್ನು ಹೊರತುಪಡಿಸಿದರೆ ದೇಶದಲ್ಲಿ ನಕ್ಸಲ್ ಪಿಡುಗು ಇಲ್ಲ. ದೇಶದಲ್ಲಿ ಮುಂದಿನ ಎರಡು ಮೂರು ವರ್ಷಗಳಲ್ಲಿ ನಕ್ಸಲ್ ಸಮಸ್ಯೆಯನ್ನು ನಿರ್ಮೂಲನೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ದೇಶದಾದ್ಯಂತ ನಕ್ಸಲ್ ಪಿಡುಗನ್ನು ನಿರ್ಮೂಲನೆ ಮಾಡಲಾಗಿದೆ. ಈ ಹಿಂದೆ ಪಶುಪತಿನಾಥದಿಂದ ತಿರುಪತಿಯವರೆಗೂ ನಕ್ಸಲ್ ಕಾರಿಡಾರ್ ಎಂದು ಹೇಳಲಾಗುತ್ತಿತ್ತು. ಈಗ ಆ ಕೂಗು ಇಲ್ಲ. ಜಾರ್ಖಂಡ್, ಬಿಹಾರ, ಒಡಿಶಾ, ತೆಲಂಗಾಣ ಸೇರಿದಂತೆ ಆಂಧ್ರಪ್ರದೇಶ ನಕ್ಸಲ್ನಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಜೊತೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳು ಕೂಡ ನಕ್ಸಲ್ನಿಂದ ಮುಕ್ತಿ ಪಡೆದಿವೆ ಎಂದರು.
ಛತ್ತೀಸಗಢ ರಾಜ್ಯದ ಕೆಲವು ಪ್ರದೇಶಗಳಲ್ಲಿ ನಕ್ಸಲರು ಇನ್ನೂ ಸಕ್ರಿಯರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದ್ದ ಕಾರಣ ನಕ್ಸಲ್ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಐದು ತಿಂಗಳ ಹಿಂದೆ ಛತ್ತೀಸಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ರಾಜ್ಯವನ್ನು ನಕ್ಸಲ್ನಿಂದ ಮುಕ್ತಗೊಳಿಸುವ ಕೆಲಸ ಆರಂಭವಾಗಿದೆ. ಇದರ ಅಂಗವಾಗಿ ಕೇವಲ 5 ತಿಂಗಳ ಅವಧಿಯಲ್ಲಿ 125 ನಕ್ಸಲರನ್ನು ಹತ್ಯೆ ಮಾಡಲಾಗಿದೆ. 352ಕ್ಕೂ ಹೆಚ್ಚು ನಕ್ಸಲರನ್ನು ಬಂಧಿಸಲಾಗಿದೆ. ಸುಮಾರು 175 ಮಂದಿ ಶರಣಾಗಿದ್ದಾರೆ ಎಂದು ತಿಳಿಸಿದರು.