ಹುಬ್ಬಳ್ಳಿ, ಮೇ.25 (DaijiworldNews/AA): ಸಂಸದ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ಧತಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯ ಪಾಸ್ ಪೋರ್ಟ್ ರದ್ಧತಿಗೂ ಒಂದು ಪ್ರಕ್ರಿಯೆ ಇರುತ್ತದೆ. ಆ ಪ್ರಕ್ರಿಯೆ ಬಿಟ್ಟು ನಾವು ಏನು ಮಾಡಲು ಸಾಧ್ಯವಿಲ್ಲ. ಪಾಸ್ ಪೋರ್ಟ್ ರದ್ಧತಿಗಾಗಿ ಪ್ರಧಾನಿ, ವಿದೇಶಾಂಗ ಸಚಿವರು ಸೇರಿ ಯಾರಿಗೇ ಪತ್ರ ಬರೆದರೂ ಆಗಲ್ಲ. ಯಾರ ಮೇಲೆ ಯಾವ ಆರೋಪ ಇದೆ? ಎಫ್ಐಆರ್ ನಲ್ಲಿ ಏನಿದೆ? ಈ ಎಲ್ಲಾ ವಿಚಾರಗಳನ್ನು ಪೊಲೀಸ್ ಇಲಾಖೆ ಕೇಂದ್ರ ಸರ್ಕಾರಕ್ಕೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಪತ್ರ ಬರೆದು ರಾಜಕೀಯ ಮಾಡಿದರೆ ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಜ್ವಲ್ ವಿರುದ್ಧ ಆರೋಪ ಬಂದಾಗಿಂದಲೂ ಬಂಧಿಸುವಂತೆ ನಾವು ಒತ್ತಾಯ ಮಾಡಿದ್ದೇವೆ. ಆತನ ವಿಚಾರದಲ್ಲಿ ಕದ್ದುಮುಚ್ಚಿ ಮಾತನಾಡಿಲ್ಲ. ಆದರೆ, ರಾಜ್ಯ ಸರ್ಕಾರ ತಮ್ಮ ತಪ್ಪು ಮರೆಮಾಚಲು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ. ದುರುದ್ದೇಶದಿಂದ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಇದಾಗಿದೆ ಎಂದು ಕಿಡಿಕಾರಿದ್ದಾರೆ.