ಬೆಂಗಳೂರು,ಮೇ 23 (DaijiworldNews/AK): ಕುಡಿಯುವ ನೀರಿಗೆ ಕಲುಷಿತ ನೀರು ಬೆರೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿಇದೀಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಐಪಿಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರು ಕಲುಷಿತವಾಗಿ ಕಾಲರಾ ಸಂಭವಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಹೀಗಾಗಿ ಬೆಂಗಳೂರಿನ ಎಲ್ಲೆಡೆ ಕುಡಿಯುವ ನೀರಿನ ಪರಿಶೀಲನೆ ನಡೆಸಲು ವ್ಯವಸ್ಥೆ ಮಾಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದರು.
ಬೆಂಗಳೂರು ಹಾಗೂ ಬೇರೆ ಭಾಗಗಳಲ್ಲಿ ಜನರಿಗೆ ಕುಡಿಯಲು ಗುಣಮಟ್ಟದ ನೀರು ನೀಡಬೇಕು ಎಂದು ಅಧಿಕಾರಿಗಳಿಗೆ ಮುಂಜಾಗ್ರತೆಯಿಂದ ಎಚ್ಚರಿಕೆ ನೀಡಿದ್ದೇವೆ.