ದೆಹಲಿ, ಮೇ.22 (DaijiworldNews/AA): ಬಿಜೆಪಿ, ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರು ಮಾಡುವ ಭಾಷಣದಲ್ಲಿ ಸಭ್ಯತೆ ಹಾಗೂ ಕಾಳಜಿಯನ್ನು ಕಾಪಾಡುವಂತೆ ನಿರ್ದೇಶನ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರತೀಯ ಚುನಾವಣಾ ಆಯೋಗ ಇಂದು ಆದೇಶ ನೀಡಿದೆ.
ಚುನಾವಣೆ ಪ್ರಚಾರ ಹೆಸರಿನಲ್ಲಿ ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಕೆಡಿಸುವುದು ಬೇಡ. ಜಾತಿ, ಸಮುದಾಯ, ಭಾಷೆ ಮತ್ತು ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಪ್ರಚಾರ ಮಾಡಬಾರದು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮದ ವಿಚಾರವನ್ನು ಇಟ್ಟುಕೊಂಡು ಭಾಷಣ ಮಾಡಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿತ್ತು. ಈ ಆರೋಪ ಮಾಡಿದ ಒಂದು ತಿಂಗಳ ಬಳಿಕ ಚುನಾವಣಾ ಆಯೋಗವು ನಡ್ಡಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಾಗೂ ನಡ್ಡಾ ಅವರ ನೀಡಿದ ಸಮರ್ಥನೆಯನ್ನು ತಿರಸ್ಕರಿಸಿದೆ. ಜೊತೆಗೆ ಪಕ್ಷದ ಸ್ಟಾರ್ ಪ್ರಚಾರಕರು ಧಾರ್ಮಿಕ ಮತ್ತು ಕೋಮುವಾದದ ಪ್ರಚಾರದಿಂದ ದೂರುಳಿದುಕೊಳ್ಳುವಂತೆ ಹೇಳಿದೆ.
ಸಮಾಜವನ್ನು ವಿಭಜಿಸುವ ಪ್ರಚಾರ ಭಾಷಣಗಳನ್ನು ನಿಲ್ಲಿಸುವಂತೆ ಚುನಾವಣಾ ಸಮಿತಿಯು ಬಿಜೆಪಿಗೆ ಹೇಳಿದೆ. ಇನ್ನು ಕಾಂಗ್ರೆಸ್ ಬಗ್ಗೆಯೂ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿತ್ತು. ಈ ದೂರಿನ ಆಧಾರ ಮೇಲೆ ರಾಹುಲ್ ಗಾಂಧಿ ಅವರು ಧರ್ಮದ ಮೇಲೆ ಮಾಡಿದ ಭಾಷಣಕ್ಕೆ ನೋಟಿಸ್ ನೀಡಿದ್ದು, ಇದಕ್ಕೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕರು ಮಾದರಿ ನೀತಿ ಸಂಹಿತೆಗೆ ವಿರುದ್ಧವಾದ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳಬೇಕು. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ದ್ವೇಷ, ಧರ್ಮ, ಜಾತಿ, ಸಮುದಾಯ ಅಥವಾ ತಮ್ಮ ಪ್ರತಿಸ್ಪರ್ಧಿಯ ವಿರೋಧ ಯಾವುದೇ ದ್ವೇಷದ ಭಾಷಣ ಮಾಡಬಾರದು ಎಂದು ಚುನಾವಣಾ ಆಯೋಗವು ಎರಡೂ ಪಕ್ಷಗಳಿಗೂ ಪತ್ರ ಬರೆದಿದೆ.