ನವದೆಹಲಿ, ಮೇ 21 (DaijiworldNews/AA): ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು 24 ಗಂಟೆಗಳ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಇಂದು ನಿರ್ಬಂಧ ಹೇರಿದೆ.
ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿ ಅವರಿಗೆ ನಿಮ್ಮ ಬೆಲೆ ಎಷ್ಟು ಎಂದು ಪ್ರಶ್ನಿಸಿದ್ದರು. ಗಂಗೋಪಾಧ್ಯಾಯ ಅವರ ಈ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸುವುದರೊಂದಿಗೆ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಿದೆ. ಹಾಗೂ ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದೆ.
ಇನ್ನು ಗಂಗೋಪಾಧ್ಯಾಯ ಅವರ ಹೇಳಿಕೆ ವಿರುದ್ಧ ಟಿಎಂಸಿ ದೂರು ನೀಡಿತ್ತು. ಇದು ಬಿಜೆಪಿ ಅಭ್ಯರ್ಥಿಯ ಸ್ತ್ರೀ ದ್ವೇಷದ ನಡವಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನ್ಯಾಯಾಂಗದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದ ಅವರು, ಮಹಿಳೆಯರ, ವಿಶೇಷವಾಗಿ ಅಧಿಕಾರದ ಸ್ಥಾನದಲ್ಲಿರುವ ಮಹಿಳೆಯ ಘನತೆಯ ಮೇಲೆ ದಾಳಿ ಮಾಡಲು ಕೀಳು ಮಟ್ಟದ ದಾರಿ ಆರಿಸಿಕೊಂಡಿರುವುದು ದುರಾದೃಷ್ಟಕರ ಎಂದು ದೂರಿತ್ತು.
ಟಿಎಂಸಿಯ ದೂರನ್ನು ಪರಿಗಣಿಸಿದ ಚುನಾವಣಾ ಆಯೋಗ, ಗಂಗೋಪಾಧ್ಯಾಯ ಅವರು ಕೆಳಮಟ್ಟದ ವೈಯಕ್ತಿಕ ದಾಳಿಯನ್ನು ಮಾಡಿದ್ದಾರೆ ಎಂದು ಮನವರಿಕೆಯಾಗಿದೆ. ಈ ಮೂಲಕ ಅವರು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ.