ಬೆಂಗಳೂರು, ಮೇ 21 (DaijiworldNews/AA): ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವಾಗಿಸಲು ಮುಖ್ಯಮಂತ್ರಿ ಮತ್ತು ತಾವು ಪಣತೊಟ್ಟಿದ್ದೇವೆ. ಪೊಲೀಸ್ ವ್ಯವಸ್ಥೆಯಲ್ಲಿ ಡ್ರಗ್ಸ್ ಮಾರಾಟ, ಪೂರೈಕೆಯನ್ನು ತಡೆಯಲು ಒಂದು ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ರಾತ್ರಿ ನಗರದ ಹೊರವಲುಯದಲ್ಲಿರುವ ಫಾರ್ಮ್ ಹೌಸೊಂದರಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು ಮತ್ತು ಅದರಲ್ಲಿ ತೆಲುಗು ನಟ ನಟಿಯರು ಸೇರಿದಂತೆ ಕೆಲ ಸೆಲಿಬ್ರಿಟಿಗಳು ಕೂಡ ಭಾಗಿಯಾಗಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿಗಳ ಮಾಹಿತಿಯನ್ನು ರೇಡ್ ಮಾಡಿದ ಪೊಲೀಸರು ಕಲೆ ಹಾಕುತ್ತಿದ್ದಾರೆ. ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಅವು ಎಲ್ಲಿಂದ ಬಂದವು ಅನ್ನೋದರ ತನಿಖೆಯಾಗಬೇಕಿದೆ ಎಂದು ತಿಳಿಸಿದರು.
ಡ್ರಗ್ಸ್ ಹಾವಳಿ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಹೊರರಾಜ್ಯಗಳಿಂದ ಬರುವ ಮಾದಕ ವಸ್ತುಗಳನ್ನು ಬರಾಮತ್ತು ಮಾಡಿಕೊಂಡು ನಾಶಪಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ ಮತ್ತು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದ ಹಲವಾರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದು ಡಿಪೋರ್ಟ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.