ಕೊಲ್ಕತ್ತಾ, ಮೇ 20(DaijiworldNews/AA): ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘನೆ ಮಾಡಿದ ಬಿಜೆಪಿ ಮೇಲೆ ಕ್ರಮ ತೆಗೆದುಕೊಳ್ಳದ ಚುನಾವಣಾ ಆಯೋಗದ ವಿರುದ್ಧ ಕೊಲ್ಕತ್ತಾ ಹೈಕೋರ್ಟ್ ಚಾಟಿ ಬೀಸಿದ್ದು, ಮುಂದಿನ ಆದೇಶವರೆಗೂ ಟಿಎಂಸಿ ಸರ್ಕಾರದ ವಿರುದ್ಧ ಯಾವುದೇ ಅವಹೇಳನಕಾರಿ ಜಾಹೀರಾತು ಪ್ರಕಟ ಮಾಡದಂತೆ ನಿರ್ಬಂಧ ವಿಧಿಸಿದೆ.
ಮತದಾನದ ಹಿಂದಿನ ದಿನ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಅವಹೇನಕಾರಿ ಜಾಹೀರಾತು ಪ್ರಕಟ ಮಾಡಿತ್ತು. ಬಿಜೆಪಿಯ ಈ ನಡೆಯ ವಿರುದ್ಧ ಕ್ರಮ ತೆಗೆದುಕೊಳ್ಳದ ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಟಿಎಂಸಿ ಸಲ್ಲಿಸಿದ ದೂರುಗಳನ್ನು ಪರಿಹರಿಸಲು ಆಯೋಗ ವಿಫಲವಾಗಿದೆ. ಚುನಾವಣೆಗಳು ಮುಗಿದ ನಂತರದ ದೂರುಗಳ ಪರಿಹಾರ ಕೋರಿ ನ್ಯಾಯಲಯಕ್ಕೆ ಬರುತ್ತಿವೆ ಎಂದು ಹೇಳಿದೆ.
ಚುನಾವಣೆ ಮತ್ತು ಮತದಾನದ ಹಿಂದಿನ ದಿನ ಬಿಜೆಪಿಯ ಜಾಹೀರಾತುಗಳು ಮಾದರಿ ನೀತಿ ಸಂಹಿತೆ, ಟಿಎಂಸಿಯ ಹಕ್ಕುಗಳು ಮತ್ತು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ. ಟಿಎಂಸಿ ವಿರುದ್ಧ ಮಾಡಲಾದ ಆರೋಪಗಳು ಮತ್ತು ಪ್ರಕಟಣೆಗಳು ಸಂಪೂರ್ಣ ಅವಹೇಳನಕಾರಿ ಮತ್ತು ಪ್ರತಿಸ್ಪರ್ಧಿಗಳನ್ನು ಅವಮಾನಿಸುವ ಮತ್ತು ವೈಯಕ್ತಿಕವಾಗಿ ದಾಳಿ ನಡೆಸುವ ಉದ್ದೇಶವನ್ನು ಹೊಂದಿವೆ. ಆದ್ದರಿಂದ, ಮುಕ್ತ, ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗಾಗಿ, ಮುಂದಿನ ಆದೇಶದವರೆಗೆ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ಕೋರ್ಟ್ ನಿರ್ಬಂಧ ಹೇರಿದೆ.