ಬೆಂಗಳೂರು, ಮೇ 20(DaijiworldNews/AA): ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೇಲೆ ಹಾಗೂ ನನ್ನ ಮೇಲೆ ಗೌರವ ಇದ್ದರೆ 24 ರಿಂದ 48 ಗಂಟೆಗಳಲ್ಲಿ ಬಂದು ಶರಣಾಗು. ಬಂದು ತನಿಖೆ ಎದುರಿಸು ಎಂದು ಪ್ರಜ್ವಲ್ ರೇವಣ್ಣಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ನಗರದ ಜೆಡಿಎಸ್ ಕಛೇರಿಯ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾಕೆ ಹೆದರಬೇಕು. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಮೇಲೆ ಪಕ್ಷ ಬೆಳೆದಿದೆ. ಅವರ ಆಶೀರ್ವಾದದಿಂದ ಬೆಳೆದಿದ್ದೇವೆ. ಎಷ್ಟು ದಿನ ಕಳ್ಳ ಪೊಲೀಸ್ ಆಟ. ದೇವೇಗೌಡರಿಗೆ ಮನವಿ ಮಾಡಿ ಅಂತ ಹೇಳಿದ್ದೆ. ಆದರೆ ಈಗ ನಾನೇ ಮನವಿ ಮಾಡ್ತೀನಿ. ಎಲ್ಲೇ ಇದ್ದರೂ ವಾಪಸ್ ಬಂದು ತನಿಖೆಗೆ ಸಹಕಾರ ನೀಡುವಂತೆ ಪ್ರಜ್ವಲ್ ಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.
ಪದ್ಮನಾಭ ನಗರಕ್ಕೆ ನಾನು ಪ್ರಜ್ವಲ್ ನನ್ನು ಬಿಡಿಸಲು ತಂದೆಯೊಂದಿಗೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ತೆರಳಿದ್ದೆ. ಇನ್ನು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ತಲೆ ತಗ್ಗಿಸುವಂತದ್ದು. ಹೀಗಾಗಿ ನಾನು ಬಹಿರಂಗವಾಗಿ ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ. ಎಲ್ಲರೂ ಅಸಹ್ಯ ಪಡುವಂತಹ ಪ್ರಕರಣ ಇದಾಗಿದ್ದು, ಇದರಲ್ಲಿ ನನ್ನ ಹಾಗೂ ದೇವೇಗೌಡರನ್ನು ತಾಲೆ ಹಾಕಿದ್ದಾರೆ ಎಂದು ಹೇಳಿದರು.