ಬೆಂಗಳೂರು, ಮೇ 20(DaijiworldNews/AA): ಸಂಸದ ಪ್ರಜ್ವಲ್ ರೇವಣ್ಣ ಯಾವುದೋ ದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುವುದು ಸರಿಯಲ್ಲ. ಅವರು ತನ್ನ ಸಂಪರ್ಕದಲ್ಲಿಲ್ಲ ಮತ್ತು ನಾನ್ಯಾವತ್ತೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಆದ ದಿನವೇ ಕುಮಾರಣ್ಣ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದಿದ್ದರು. ಆರೋಪ ಬಂದ ಮೇಲೆ ಪ್ರಜ್ವಲ್ ರೇವಣ್ಣ ಎಸ್ಐಟಿ ತನಿಖೆ ಎದುರಿಸುವುದು ಸೂಕ್ತ. ಅಶ್ಲೀಲ ವಿಡಿಯೋಗಳ ಕೇಸ್ ನಲ್ಲಿ ಅವರು ಆರೋಪಿಯಾಗಿರುವುದರಿಂದ ಎಲ್ಲೇ ಇದ್ದರೂ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಹಾಜರಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಮಾಜಿ ಸಂಸದ ಶಿವರಾಮೇಗೌಡರದ್ದು ಎನ್ನಲಾದ ಆಡಿಯೋದಲ್ಲಿ ವಿಚಾರವಾಗಿ ಮಾತನಾಡಿದ ಅವರು, ಶಿವರಾಮೇಗೌಡ ಸರ್ಕಾರದಲ್ಲಿರುವ ಒಬ್ಬ ವ್ಯಕ್ತಿಯ ಹೆಸರು ಉಲ್ಲೇಖಿಸಿದ್ದಾರೆ. ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೋ ಕೇಳಿದ್ದಾರೆ. ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಅವರ ಹೇಳಿಕೆ, ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ರಾಜಕೀಯ ಮಾಡಿ, ಆದರೆ ಇನ್ನೊಬ್ಬರ ಸಾವನ್ನು ಬಯಸಿ ರಾಜಕೀಯ ಮಾಡೋದು ಸರಿಯಲ್ಲ ಎಂದರು.